ಮೂರು ಕೃಷಿ ಕಾಯಿದೆಗಳು ರೈತ ವಿರೋಧಿಯಲ್ಲ: ಸಿ.ಟಿ.ರವಿ

Update: 2021-11-28 14:04 GMT
ಸಿ.ಟಿ.ರವಿ (photo: twitter@CTRavi_BJP)

ಬೆಂಗಳೂರು, ನ. 28: `ಕೃಷಿ ಸುಧಾರಣೆಗೆ ಸಂಬಂಧಿಸಿದ ಮೂರು ಕಾಯಿದೆಗಳೂ ರೈತ ವಿರೋಧಿಯಲ್ಲ. ಯಾವುದೇ ರೈತವಿರೋಧಿ ಅಂಶ ಇಲ್ಲ. ರೈತರ ಹಿತದೃಷ್ಟಿಯಿಂದ ಈ ಕಾಯಿದೆ ತಂದಿದ್ದೇವೆ. ಈ ಕಾಯಿದೆ ಬಗ್ಗೆ ಮನವರಿಕೆ ಮಾಡಲು ಸಾಧ್ಯವಾಗಿಲ್ಲ. ಇದೀಗ ದೇಶದ ಹಿತದೃಷ್ಟಿಯಿಂದ ಕಾಯಿದೆಗಳನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವರಣೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ದೇಶವಿರೋಧಿ ಶಕ್ತಿಗಳು ಈ ಕಾಯಿದೆ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ದೇಶದ ವಿರುದ್ಧ ಬಳಸಿಕೊಳ್ಳಬಾರದೆಂಬ ದೃಷ್ಟಿಯಿಂದ ಅದನ್ನು ಹಿಂದಕ್ಕೆ ಪಡೆದಿದ್ದಾರೆ. ರೈತರು ಎಲ್ಲಿ ಬೇಕಾದರೂ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡುವುದು ರೈತ ವಿರೋಧಿ ಕ್ರಮವೇ?. ಕಾಯಿದೆ ರೈತವಿರೋಧಿ ಎಂಬ ಭ್ರಮೆಯನ್ನು ಹುಟ್ಟಿಸುವ ಕೆಲಸವನ್ನು ರಾಜಕೀಯ ಪ್ರೇರಿತವಾಗಿ ಮಾಡಿದ್ದಾರೆ ಎಂದು ದೂರಿದರು.

`ಒಂದಲ್ಲ ಒಂದು ದಿನ ಕೃಷಿ ಸುಧಾರಣಾ ಕಾಯಿದೆ ವಿಷಯ ಜನರಿಗೆ ಅರ್ಥವಾಗಲಿದೆ. ಆಗ ರೈತರೇ ಬೀದಿಗಿಳಿದು ಈ ಸುಧಾರಣಾ ಕಾಯಿದೆಯನ್ನು ಜಾರಿಗೊಳಿಸಲು ಒತ್ತಾಯಿಸುವ ದಿನ ಬರಲಿದೆ. ಪ್ರತಿ ಮನ್ ಕೀ ಬಾತ್ ಪ್ರೇರಣೆ ಕೊಡುವ ಸಂಗತಿ. ಅದರಲ್ಲಿ ರಾಜಕಾರಣ ಇರುವುದಿಲ್ಲ. ಬದಲಾಗಿ ದೇಶದ ಏಕತೆ ಕಡೆಗೆ ಚಿಂತನೆ ಅದರಲ್ಲಿ ಇರುತ್ತದೆ ಎಂದು ಅವರು ನುಡಿದರು.

ಇದು ಸಾಮಾನ್ಯರಲ್ಲೂ ಸಾಧನೆಯ ಆತ್ಮವಿಶ್ವಾಸ ತುಂಬುತ್ತದೆ. ಈ ಬಾರಿ ಅಮೃತ ಮಹೋತ್ಸವ, ಆಯುಷ್ಮಾನ್ ಭಾರತ್ ಕಾರ್ಡ್ ಹೇಗೆ ಪ್ರಯೋಜನಕಾರಿ ಎಂಬುದನ್ನು ಪ್ರಧಾನಿಯವರು ವಿವರಿಸಿದ್ದಾರೆ. ಸ್ಟಾರ್ಟಪ್, ಕೊರೋನಾ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಕುರಿತು ಅವರು ಮಾಹಿತಿ ಕೊಟ್ಟಿದ್ದಾರೆ. ಈ ರೀತಿಯ ಪ್ರಧಾನಿ ಮೋದಿ ಅವರು ಮಾತ್ರ. ಅವರದು ಭಿನ್ನವಾದ ಕಾರ್ಯವೈಖರಿ. ಅವರದು ಸೇವಾಪರ ಚಿಂತನೆ ಎಂದು ವಿವರಿಸಿದರು. ಇದಕ್ಕಾಗಿ ಪ್ರಧಾನಿಯವರಿಗೆ ವಿಶೇಷ ಧನ್ಯವಾದಗಳು ಎಂದರು. ಕೋವಿಡ್ ಕುರಿತು ಇನ್ನೂ ಜಾಗರೂಕತೆ ವಹಿಸುವ ಅಗತ್ಯವಿದೆ ಎಂದರು.

ಕಾಂಗ್ರೆಸ್ ಪಕ್ಷವು ವಂಶವಾದ, ಜಾತಿವಾದವನ್ನು ಪೋಷಿಸಿತು. ಭ್ರಷ್ಟಾಚಾರದ ಬೀಜ ಬಿತ್ತಿ ಅದು ಹೆಮ್ಮರವಾಗಿ ಬೆಳೆಸಲು ಪೋಷಿಸಿದ್ದೇ ಕಾಂಗ್ರೆಸ್. ಕಾಂಗ್ರೆಸ್ ಕಡೆ ಸತ್ತ ಕತ್ತೆ ಬಿದ್ದಿದೆ. ಅವರ ಪಕ್ಷದ ಕಡೆ ಅವರು ಮೊದಲು ನೋಡಿಕೊಳ್ಳಲಿ. ಕಾಂಗ್ರೆಸ್‍ನ ಬಹಳಷ್ಟು ಮುಖಂಡರು ಜಾಮೀನಿನಲ್ಲಿದ್ದಾರೆ. ಭ್ರಷ್ಟಾಚಾರದ ಆರೋಪದಡಿ ಅವರು ಜಾಮೀನಿನಲ್ಲಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆ ಸರ್ವಜ್ಞನಗರ ಮಂಡಲದಲ್ಲಿ ಪ್ರತಿ ತಿಂಗಳ ಕೊನೆಯ ರವಿವಾರ ಪ್ರಧಾನಮಂತ್ರಿ ಅವರ ನೆಚ್ಚಿನ ಕಾರ್ಯಕ್ರಮ `ಮನ್ ಕೀ ಬಾತ್'ನಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸರ್ವಜ್ಞನಗರ ಮಂಡಲದ ಅಧ್ಯಕ್ಷ ಮುನಿರಾಜ್ ಕಾರ್ಣಿಕ್, ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಗೋವಿಂದರಾಜ್, ಕೇಂದ್ರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮೋದಿ, ನಗರ ವಾರ್ಡ್ ಪ್ರಮುಖರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News