ಕುದುರೆಮುಖ ಪೊಲೀಸ್ ವೃತ್ತ ನಿರೀಕ್ಷಕರಿಂದ ದೌರ್ಜನ್ಯ ಆರೋಪ: ಆಟೊ ಸೇವೆ ಸ್ಥಗಿತಗೊಳಿಸಿ ಆಟೊ ಚಾಲಕರ ಪ್ರತಿಭಟನೆ

Update: 2021-11-28 14:52 GMT

ಕಳಸ, ನ.28: ತಾಲೂಕಿನ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿರೇಬೈಲ್ ಗ್ರಾಮದಲ್ಲಿರುವ ಆಟೊ ನಿಲ್ದಾಣವೊಂದನ್ನು ಸ್ಥಳಾಂತರ ಮಾಡಬೇಕೆಂದು ಕುದುರೆಮುಖ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಆಟೊ ಚಾಲಕರ ಮೇಲೆ ಒತ್ತಡ ಹೇರಿರುವುದನ್ನು ಖಂಡಿಸಿ ಗ್ರಾಮದ ಆಟೊ ಚಾಲಕರು ಕಳೆದ ಮೂರು ದಿನಗಳಿಂದ ಆಟೊಗಳ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದು, ಇದರಿಂದ ಶಾಲಾ ಕಾಲೇಜು ಮಕ್ಕಳು, ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುವಂತಾಗಿದೆ.

ಕಳಸ ತಾಲೂಕು ಕೇಂದ್ರದಿಂದ 12 ಕಿಮೀ ದೂರದಲ್ಲಿರುವ ಹಿರೇಬೈಲು ಗ್ರಾಮದಲ್ಲಿ ಹಾದು ಹೋಗಿರುವ ಚಿಕ್ಕಮಗಳೂರು-ಮೂಡಿಗೆರೆ-ಕಳಸ-ಹೊರನಾಡು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಕಳೆದ 25 ವರ್ಷಗಳಿಂದ ಬಡವರ್ಗದ ಸುಮಾರು 40 ಆಟೊ ಚಾಲಕರು ಆಟೊ ನಿಲ್ದಾಣ ನಿರ್ಮಿಸಿಕೊಂಡು ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು, ಸದ್ಯ ಸ್ಥಳೀಯ ರಾಜಕಾರಣಿಯೊಬ್ಬರ ಒತ್ತಡದ ಹಿನ್ನೆಲೆಯಲಿ ಕುದುರೆಮುಖ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ರಮೇಶ್ ಎಂಬವರು ಗ್ರಾಮದಲ್ಲಿರುವ ಆಟೊ ನಿಲ್ದಾಣವನ್ನು ಮುಖ್ಯ ರಸ್ತೆಯಿಂದ ಬೇರೆಗೆ ಸ್ಥಳಾಂತರ ಮಾಡಬೇಕೆಂದು ಒತ್ತಡ ಹೇರುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ಆಟೊ ಚಾಲಕರು ಆರೋಪಿಸಿದ್ದು, ಪೊಲೀಸ್ ವೃತ್ತ ನಿರೀಕ್ಷಕ ರಮೇಶ್ ಅವರ ದೌರ್ಜನ್ಯ ಖಂಡಿಸಿ ಗ್ರಾಮದ 40 ಆಟೊ ಚಾಲಕರು ಕಳೆದ ಮೂರು ದಿನಗಳಿಂದ ಆಟೊ ಸೇವೆ ನಿಲ್ಲಿಸಿ ಪ್ರತಿಭಟನೆಗಿಳಿದಿದ್ದಾರೆ.

ಇಡಕಣಿ ಗ್ರಾಮ ಪಂಚಾಯತ್ ಕಚೇರಿ ಎದುರು ತಮ್ಮ ಆಟೊಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ಮಾಡುತ್ತಿರುವ ಆಟೊ ಚಾಲಕರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಆಟೊಗಳ ಸೇವೆ ಬಂದ್ ಆಗಿರುವುದರಿಂದ ಸಾವಿರಾರು ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹಿರೇಬೈಲು ಗ್ರಾಮದ ಸುತ್ತಮುತ್ತ ಕಾಫಿ, ಟೀ ಎಸ್ಟೇಟ್‍ಗಳು ಹೆಚ್ಚಿದ್ದು, ಗ್ರಾಮದ ಸುತ್ತಮುತ್ತಲಿನ ನೂರಾರು ಗ್ರಾಮಗಳ ಕಾರ್ಮಿಕರು ತಮ್ಮ ಅಗತ್ಯಗಳಿಗಾಗಿ ಹಿರೇಬೈಲು ಗ್ರಾಮ ಹಾಗೂ 12 ಕಿಮೀ ದೂರದಲ್ಲಿರುವ ಕಳಸ ಪಟ್ಟಣವನ್ನು ಅವಲಂಬಿಸಿದ್ದಾರೆ. ಮಲೆನಾಡು ಭಾಗದ ಈ ಗ್ರಾಮದಲ್ಲಿ ಜನರಿ ಸಮರ್ಪಕ ಸಾರಿಗೆ ಸೌಲಭ್ಯ ಮರಿಚೀಕೆಯಾಗಿದ್ದು, ಸಾರಿಗೆ ಸೌಕರ್ಯಕ್ಕಾಗಿ ಗಂಟೆಗೊಂದರಂತೆ ಸಂಚರಿಸುವ ಖಾಸಗಿ ಬಸ್‍ಗಳನ್ನೇ ಅವಲಂಬಿಸಿದ್ದು, ಈ ಖಾಸಗಿ ಬಸ್‍ಗಳ ಹೊರತಾಗಿ ಇಲ್ಲಿನ ಗ್ರಾಮಸ್ಥರು, ಶಾಲಾ ಕಾಲೇಜು ಮಕ್ಕಳು ಸುಗಮ ಸಂಚಾರಕ್ಕೆ ಇದುವರೆಗೂ ಆಟೊಗಳನ್ನೇ ಅವಲಂಬಿಸಿದ್ದಾರೆ. 

ಸದ್ಯ ಪೊಲೀಸ್ ಅಧಿಕಾರಿ ರಮೇಶ್ ಗ್ರಾಮದಲ್ಲಿರುವ ಆಟೊ ನಿಲ್ದಾಣವನ್ನು ಸ್ಥಳಾಂತರ ಮಾಡಬೇಕೆಂದು ಪ್ರತಿನಿತ್ಯ ಒತ್ತಡ ಹೇರುತ್ತಾ, ಸುಳ್ಳು ಆರೋಪ ಮಾಡುತ್ತಾ ದೌರ್ಜನ್ಯ ನಡೆಸುತ್ತಿದ್ದಾರೆಂದು ಆರೋಪಿ ಆಟೊ ಚಾಲಕರು ಆಟೊ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಹಿರೇಬೈಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ದೂರದ ಗುಡ್ಡಗಾಡು ಪ್ರದೇಶ, ಕಾಫಿ, ಟೀ ಎಸ್ಟೇಟ್‍ನಲ್ಲಿರ ತಮ್ಮ ಮನೆಗಳಿಗೆ ತೆರಳು ಹಾಗೂ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರವಿವಾರ ಗರ್ಭಿಣಿ ಮಹಿಳೆಯೊಬ್ಬರು ತುರ್ತಾಗಿ ಕಳಸ ಪಟ್ಟಣಕ್ಕೆ ತೆರಳಲು ಆಟೊಗಳಿಲ್ಲದೇ ಗಂಟೆಗಟ್ಟಲೇ ಗ್ರಾಮದಲ್ಲಿ ಕಾದು ಸುಸ್ತಾಗಿದ್ದ ಘಟನೆ ನಡೆದಿದೆ. ಅಲ್ಲದೇ ಹಿರೇಬೈಲು ಗ್ರಾಮದಲ್ಲಿರುವ ಸರಕಾರಿ ಖಾಸಗಿ ಶಾಲೆಗಳಿಗೆ ಬರುವ ಶಾಲಾ ಮಕ್ಕಳು ಆಟೊಗಳ ಸೇವೆ ಇಲ್ಲದೇ ಕಳೆದ ಮೂರು ದಿನಗಳಿಂದ ನಡೆದುಕೊಂಡೇ ತೆರಳುವಂತಾಗಿದೆ.

ಹಿರೇಬೈಲು ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಹೆದ್ದಾರಿ ಪಕ್ಕದಲ್ಲೇ ಇರುವ ಆಟೊ ನಿಲ್ದಾಣದಲ್ಲಿ 40 ಚಾಲಕರು ಆಟೊ ನಿಲ್ಲಿಸಿಕೊಂಡು ಸ್ಥಳೀಯರಿಗೆ ಸೇವೆ ನೀಡುತ್ತ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಆಟೊ ನಿಲ್ದಾಣದ ಪಕ್ಕದಲ್ಲಿ ಹೊಸದಾಗಿ ಕಟ್ಟಡವೊಂದು ನಿರ್ಮಾಣವಾಗಿದ್ದು, ಈ ಕಟ್ಟಡಕ್ಕೆ ಆಟೊಗಳಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಬಿಜೆಪಿ ಪಕ್ಷದ ರಾಜಕಾರಣಿಯೊಬ್ಬರು ಕುದುರೆಮುಖ ಪೊಲೀಸ್ ವೃತ್ತ ನಿರೀಕ್ಷಕರ ಮೇಲೆ ಪ್ರಭಾವ ಬೀರಿದ್ದು, ಈ ಕಾರಣಕ್ಕೆ ವೃತ್ತ ನಿರೀಕ್ಷಕ ಆಟೊ ನಿಲ್ದಾಣ ಸ್ಥಳಾಂತರ ಮಾಡಬೇಕೆಂದು ಪ್ರತಿನಿತ್ಯ ಆಟೊ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆಟೊ ಚಾಲಕರು ಯುವತಿಯರನ್ನು ಚುಡಾಯಿಸುತ್ತಾರೆ, ಅಪಘಾತ ಮಾಡುತ್ತಾರೆಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಪೊಲೀಸರ ಈ ದೌರ್ಜನ್ಯ ನಿಲ್ಲುವವರೆಗೂ ಆಟೊ ಸೇವೆ ನೀಡಲ್ಲ. ಆಟೊ ನಿಲ್ದಾಣ ಸ್ಥಳಾಂತರ ಮಾಡಬೇಕೆಂದು ಒತ್ತಡ ಹಾಕುತ್ತಿರುವ ಪೊಲೀಸರು ಆಟೊಗಳನ್ನು ಎಲ್ಲಿ ನಿಲ್ಲಿಸಬೇಕೆಂದೂ ತಿಳಿಸುತ್ತಿಲ್ಲ. ಇದರಿಂದ ನಾವು ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಪೊಲೀಸರ ದೌರ್ಜನ್ಯದ ವಿರುದ್ಧ ಯಾವ ಜನಪ್ರತಿನಿಧಿಗಳು ನಮ್ಮ ಅಳಲು ಕೇಳುತ್ತಿಲ್ಲ ಎಂದು ಆಟೊ ಚಾಲಕರು ಬಳಿ ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News