ಬೆಂಗಳೂರು ಸೇರಿ ಮೈಸೂರು, ಧಾರವಾಡ, ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಆದೇಶ

Update: 2021-11-28 15:53 GMT

ಬೆಂಗಳೂರು, ನ. 28: ಇತ್ತಿಚೇಗೆ ಧಾರವಾಡ, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚು-ಹೆಚ್ಚು ಕೋವಿಡ್ 19 ಪ್ರಕರಣಗಳು ಪತ್ತೆಯಾಗುತ್ತಿದ್ದು, ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು 72 ಗಂಟೆಗಳ ಹಳೆಯದಲ್ಲದ ಆರ್‍ಟಿಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಶಿಕ್ಷಣ ಸಂಸ್ಥೆಗಳಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಬರುವವರು ಶಿಕ್ಷಣ ಸಂಸ್ಥೆಗಳ ಪ್ರವೇಶ ದ್ವಾರದಲ್ಲಿ ಲಸಿಕೆ ಪಡಿದಿರಲಿ ಅಥವಾ ಪಡೆಯದಿರಲಿ 72 ಗಂಟೆಗಳ ಹಿಂದಿನ ಕೋವಿಡ್ ನೆಗೆಟಿವ್ ವರದಿಯನ್ನು ತೋರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

15 ದಿನಗಳ ಹಿಂದೆ ಕೇರಳ ರಾಜ್ಯದಿಂದ ವೈದ್ಯಕೀಯ ಶಿಕ್ಷಣಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ಕಾಲೇಜುಗಳು ಮತ್ತು ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾಭ್ಯಾಸಕ್ಕಾಗಿ ಬಂದಿದ್ದರೆ, ಅವರನ್ನು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು. ಹಾಗೆಯೇ, ಇನ್ನು ಮುಂದೆ ಕೇರಳ ರಾಜ್ಯದಿಂದ ಆಗಮಿಸುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ 7ನೆ ದಿನದಂದು ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಕೋವಿಡ್-19 ಪಾಸಿಟಿವ್ ಬಂದರೆ, ಕ್ವಾರೆಂಟೈನ್‍ನಲ್ಲಿರಬೇಕು. ಒಂದು ವೇಳೆ ನೆಗೆಟಿವ್ ಬಂದರೆ 7ನೇ ದಿನದಂದು ಪುನರಾವರ್ತಿತ ಆರ್‍ಟಿಪಿಸಿಆರ್ ಗೆ ಒಳಗಾಗಬೇಕು ಎಂದು ತಿಳಿಸಿದೆ. ಕೇರಳ ರಾಜ್ಯದ ಗಡಿಯಲ್ಲಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂದರೆ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಈಗಾಗಲೇ ಸ್ಥಾಪಿತವಾದ ಚೆಕ್‍ ಪೋಸ್ಟ್ ಗಳು ಸಕ್ರಿಯವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು ಮತ್ತು ಎಲ್ಲರನ್ನು ಶೇ.100 ಸ್ಕ್ರೀನಿಂಗ್‍ಗೆ ಒಳಪಡಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಇದು ಪ್ರತಿದಿನ ಶಿಕ್ಷಣ, ವ್ಯವಹಾರ ಮತ್ತು ಇತರ ಕಾರಣಗಳಿಂದ ರಾಜ್ಯಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಎಲ್ಲ ಸಾರ್ವಜನಿಕರಿಗೆ ಅನ್ವಯವಾಗುತ್ತದೆ ಎಂದು ಸರಕಾರದ ಆದೇಶದಲ್ಲಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News