ಓ ಮೆಣಸೇ...

Update: 2021-11-28 19:30 GMT

ದೇಶದ ಅನೇಕ ರಾಜಕೀಯ ಪಕ್ಷಗಳಿಗೆ ಸ್ವಹಿತಾಸಕ್ತಿಯೇ ಮುಖ್ಯ -ನರೇಂದ್ರ ಮೋದಿ, ಪ್ರಧಾನಿ

ನಿಮಗೆ ಮಾತ್ರ ಅದಾನಿ ಮತ್ತು ಅಂಬಾನಿ ಹಿತಾಸಕ್ತಿ ಮುಖ್ಯ.

ಹುಚ್ಚು ಹಿಡಿದವರಿಗೆ ಇಡೀ ಪ್ರಪಂಚವೇ ಹುಚ್ಚು ಹಿಡಿದಂತೆ ಕಾಣುತ್ತದೆ -ಆರಗ ಜ್ಞಾನೇಂದ್ರ, ಸಚಿವ
ಈ ಕುರಿತು ನಿಮಗೇನಾದರೂ ಅನುಭವ ಇದೆಯೇ?

ಕಾಂಗ್ರೆಸ್‌ಗೆ ಗೋಮಾತೆ, ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ಶಾಪ ತಟ್ಟಿದೆ -ನಳಿನ್‌ಕುಮಾರ್ ಕಟೀಲು, ಸಂಸದ
ನಿಮ್ಮನ್ನು ಕಾಪಾಡುತ್ತಿರುವುದು ಗೋಡ್ಸೆ ಮಾಡಿದ ಪುಣ್ಯದ ಕೆಲಸ ಇರಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಹೆಜ್ಜೆ ಹಿಂದೆ ಸರಿಯುವುದು ಅವಮಾನ ಎಂದು ಭಾವಿಸಬೇಕಿಲ್ಲ-ಸಿ.ಟಿ.ರವಿ, ಶಾಸಕ
ಚೀನಾ ಗಡಿಯ ಬಗ್ಗೆ ಸ್ಪಷ್ಟೀಕರಣವೇ?

ಪ್ರಧಾನಿ ಮೋದಿ ಸದಾ ದೇಶದ ಒಳಿತು ಮತ್ತು ಜನರ ಭಾವನೆ ಎರಡಕ್ಕೂ ಬೆಲೆ ಕೊಡುತ್ತಾರೆ -ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವ
ಕೃಷಿಕರಿಗೆ ಬೇಕಾಗಿರುವುದು ಅವರ ಬೆಳೆಗೆ ಬೆಂಬಲ ಬೆಲೆ.

ಅಧಿಕಾರ ದೊರೆತಾಗ ಅಭಿವೃದ್ಧಿ ಕಾರ್ಯ ಮಾಡಿದರೆ ಜನರು ಹತ್ತಿರವಾಗಲು ಸಾಧ್ಯವಾಗುತ್ತದೆ -ಶ್ರೀರಾಮುಲು, ಸಚಿವ
ಜನರು ಹತ್ತಿರವಾಗುವುದು ನಿಮಗೆ ಇಷ್ಟವಿಲ್ಲವೇ?

ಉ.ಪ್ರ.ವಿಧಾನ ಸಭೆ ಚುನಾವಣೆ ಎಂದರೆ ಅದು ದೇಶದ ಮತ್ತು ರಾಮಮಂದಿರದ ಚುನಾವಣೆಯಾಗಿದೆ -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
  ರೈತ ವಿರೋಧಿ ಕಾನೂನನ್ನು ಹಿಂದೆಗೆದಿರುವುದು ನೋಡಿದರೆ ಹಾಗನ್ನಿಸುವುದಿಲ್ಲ.

ಪ್ರಧಾನಿ ಮೋದಿ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ ಎಂದರೆ, ಅವರು ಎರಡು ಹೆಜ್ಜೆ ಮುಂದಿಡುತ್ತಾರೆ ಎಂದೇ ಅರ್ಥ -ಕಲ್ಲಡ್ಕ ಪ್ರಭಾಕರ ಭಟ್,ಆರೆಸ್ಸೆಸ್ ಮುಖಂಡ
ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ ಎಂದರೆ ಅವರ ಮುಂದೆ ದೊಡ್ಡ ಪ್ರಪಾತ ಇದೆ ಎಂದು ಅರ್ಥ.

ಕೃಷಿ ಮಸೂದೆಗಳನ್ನು ವಾಪಸ್ ಪಡೆದಿರುವುದರಿಂದ ದೇಶದ ಮೇಲೆ ದೂರಗಾಮಿ ಕೆಟ್ಟ ಪರಿಣಾಮ ಬೀರಲಿದೆ -ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ನಿಮ್ಮ ಪಾಲಿಗೆ ದೇಶವೆಂದರೆ ಅಂಬಾನಿ, ಅದಾನಿಯಾಗಿರುವುದರಿಂದ ನಿಮ್ಮ ಮಾತು ನಿಜ.

ಜೈಶ್ರೀರಾಮ್ ಎಂಬ ಘೊಷಣೆ ಈಗ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಜನರು ಶ್ರೀರಾಮ ನಡೆದ ಹಾದಿಯಲ್ಲಿ ಸಾಗಲು ಪ್ರಯತ್ನಿಸಬೇಕು -ಮೋಹನ್ ಭಾಗವತ್, ಆರೆಸ್ಸೆಸ್ ವರಿಷ್ಠ
ಜೈ ಭೀಮ್ ಘೋಷಣೆ ನಿಮಗೆ ಕೇಳಿಸುತ್ತಿಲ್ಲವೇ?

ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ನನಗೆ ಎರಡು ಕಣ್ಣುಗಳಿದ್ದಂತೆ -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
  ನಿಮ್ಮ ಮೇಲೆ ಅವರು ಕಣ್ಣಿಟ್ಟಿದ್ದಾರೆ ಎಂದು ಇದರರ್ಥವೇ?

ರಾಜ್ಯದಲ್ಲಿ 4 ಪರ್ಸೆಂಟ್ ಸರಕಾರ ಆಡಳಿತ ನಡೆಸುತ್ತಿದೆ -ಎಚ್.ಡಿ.ರೇವಣ್ಣ, ಶಾಸಕ
ಅದರಲ್ಲಿ ನಿಮಗೆ ಎಷ್ಟು ಪರ್ಸೆಂಟ್ ಪಾಲಿದೆ?

  ಆರಗ ಜ್ಞಾನೇಂದ್ರ ಇಡೀ ರಾಜ್ಯಕ್ಕೆ ಗೃಹಮಂತ್ರಿಯಾಗಿಲ್ಲ, ತೀರ್ಥಹಳ್ಳಿಗೆ ಮಾತ್ರ ಗೃಹ ಸಚಿವರಾಗಿದ್ದಾರೆ -ಕಿಮ್ಮನೆ ರತ್ನಾಕರ, ಮಾಜಿ ಸಚಿವ
  ಮೋದಿಯವರು ಗುಜರಾತಿಗಷ್ಟೇ ಪ್ರಧಾನಿಯಾಗಿಲ್ಲವೇ?

ನನ್ನ ಹಾಗೂ ಸಿದ್ದರಾಮಯ್ಯರ ನಡುವಿನ ಆಪ್ತತೆ ಸಾಯುವ ತನಕವೂ ಇರುತ್ತದೆ -ಝಮೀರ್ ಅಹ್ಮದ್, ಶಾಸಕ
ಯಾರು ಸಾಯುವ ತನಕ?

ದೇಶದಲ್ಲಿ ಕೊರೋನ ಸೋಂಕಿನ ತೀವ್ರತೆ ಕಡಿಮೆ ಯಾಗುತ್ತಿರುವುದು ಸಂತಸದ ಸಂಗತಿ -ಮನಸುಖ್ ಮಾಂಡವೀಯ, ಕೇಂದ್ರ ಸಚಿವ
ಮೂರನೆಯ ಹಂತದ ಲಸಿಕೆ ಸಿದ್ಧವಾದಾಕ್ಷಣ ತೀವ್ರತೆ ಜಾಸ್ತಿಯಾಗಬಹುದು.

ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ -ಮುಲಾಯಂ ಸಿಂಗ್ ಯಾದವ್, ಎಸ್ಪಿವರಿಷ್ಠ
ಗಾಳಿ ಬೀಸಿದ ಕಡೆಗೆ ಹಾರುವುದು ಸದ್ಯದ ರಾಜಕಾರಣ.

ಕಾಂಗ್ರೆಸ್‌ನಲ್ಲಿರುವುದು ಒಂದೇ ಬಣ, ಅದು ಸೋನಿಯಾ ಬಣ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಚುನಾವಣೆ ಹತ್ತಿರವಾದಾಗ ಬಣಗಳ ಬಣ್ಣ ಬಯಲಾಗುತ್ತದೆ.

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಾಗ ಪ್ರಧಾನಿಯ ಮಾತು, ಧ್ವನಿ ಜೇನಿಗಿಂತಲೂ ಸವಿಯಾಗಿತ್ತು. ಹಾಗಾಗಿ ಅಲ್ಲೇನೋ ಅಪಾಯ ಇದೆ ಎಂಬ ಭಾವನೆ ನನ್ನಲ್ಲಿ ಉಂಟಾಯಿತು -ರಾಕೇಶ್ ಟಿಕಾಯತ್, ಬಿಕೆಯು ಮುಖಂಡ
ಪ್ರತಿಭಟಿಸುತ್ತಿರುವುದು ಹೆಜ್ಜೇನುಗಳು ಎನ್ನುವುದು ಗೊತ್ತಾಗಿರಬೇಕು.

ಪ್ರಧಾನಿ ಮೋದಿ ದೊಡ್ಡ ನಟ, ಅವರು ಹಾದಿ ತಪ್ಪಿ ರಾಜಕೀಯಕ್ಕೆ ಬಂದಿದ್ದಾರೆ.ಸಿನೆಮಾ ರಂಗದಲ್ಲಿದ್ದಿದ್ದರೆ ದೊಡ್ಡ ಹೆಸರು ಮಾಡುತ್ತಿದ್ದರು -ಅಸದುದ್ದೀನ್ ಉವೈಸಿ,ಎಐಎಂಐಎಂ ಮುಖ್ಯಸ್ಥ
ಅವರ ಜೊತೆಗೆ ನೀವು ಹೋದರೆ, ಪೋಷಕ ನಟನಾಗಿ ಖ್ಯಾತಿಯನ್ನು ಪಡೆಯಬಹುದಿತ್ತು.

ತಮಿಳುನಾಡಿನ ಡಿಎಂಕೆ ಪಕ್ಷದವರು ಯಾವಾಗಲೂ ವ್ಯವಸ್ಥೆಯನ್ನು ಪ್ರಶ್ನಿಸುವವರು -ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಅದಕ್ಕೆ ತಮಿಳುನಾಡಿನಲ್ಲಿ ಕಮಲ ಅರಳುವುದಕ್ಕೆ ಸಾಧ್ಯವಿಲ್ಲದೆ ಇರುವುದು.

ಬಿಜೆಪಿ ಸ್ವಂತ ಶಕ್ತಿಯ ಮೇಲೆ ಪರಿಷತ್ ಚುನಾವಣೆ ಎದುರಿಸಲಿದೆ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಬಿಜೆಪಿಯಲ್ಲೇ ಅಷ್ಟೊಂದು ಹಣ ಇದೆಯೆಂದಾಯಿತು.

ನಾನು ಯಾವಾಗಲೂ ಮಮತಾ ಬ್ಯಾನರ್ಜಿ ಜೊತೆಗಿದ್ದೇನೆ. ಅದಕ್ಕಾಗಿ ಅವರ ಪಕ್ಷ ಟಿಎಂಸಿ ಸೇರುವ ಅಗತ್ಯವಿಲ್ಲ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ
ಬಹುಶಃ ಅವರು ಸೇರಿಸಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಿರಬೇಕು.

ಕಾಂಗ್ರೆಸ್ ಯಾವಾಗಲೂ ಸಿದ್ಧಾಂತ, ವೈಚಾರಿಕತೆಯ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ -ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಯಾರ ಸಿದ್ಧಾಂತ, ಯಾರ ವಿಚಾರ ಎನ್ನುವುದನ್ನೂ ಸ್ಪಷ್ಟಪಡಿಸಿ.

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ -ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ
ಸನ್ಯಾಸಿಗಳೆಲ್ಲ ರಾಜಕಾರಣಿಯಾಗಲು ಹೊರಟಿ ರುವಾಗ, ರಾಜಕಾರಣದಲ್ಲಿ ಸನ್ಯಾಸಿಗಳು ಇರಲು ಹೇಗೆ ಸಾಧ್ಯ?

ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತಂದ ಹನುಮಂತ (ರಮೇಶ್ ಜಾರಕಿಹೊಳಿ) ಈಗ ನಮ್ಮ ಪಕ್ಷದಲ್ಲಿಲ್ಲ, ಆತ ಬಿಜೆಪಿಯ ಮರಹತ್ತಿ ಕೂತಿದ್ದಾನೆ. ಇನ್ನು ಬಿಜೆಪಿಯ ಗತಿ ಏನಾಗಲಿದೆಯೋ?
-ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಹನುಮಂತನ ಬ್ರಹ್ಮಚರ್ಯಕ್ಕೆ ಅವಮಾನ.

ಜೆಡಿಎಸ್ ಷಡ್ಯಂತ್ರದಿಂದಾಗಿ ನಾನು ಸೇರಿ ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಬೇಕಾಯಿತು -ಎಂ.ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ನಿಮ್ಮ ಪಕ್ಷದೊಳಗೆ ಷಡ್ಯಂತ್ರ ನಡೆಸುವವರೇನು ಕಡಿಮೆ ಇದ್ದಾರೆಯೇ?

ಅನ್ನದಾತರ ಮುಂದೆ ನಾವು ತಲೆ ಬಾಗುತ್ತೇವೆ. ಅವರ ಮೇಲೆ ಸರಕಾರ ಯಾವುದೇ ಕಾರಣಕ್ಕೂ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ಮುಂದೆಯೂ ನಡೆಸುವುದಿಲ್ಲ -ರಾಜನಾಥ್ ಸಿಂಗ್, ಕೇಂದ್ರ ಸಚಿವ
ಇದು, ದಬ್ಬಾಳಿಕೆ ನಡೆಸುವುದು ಕಷ್ಟ ಎನ್ನುವುದು ಗೊತ್ತಾದ ಬಳಿಕದ ತಪ್ಪೊಪ್ಪಿಗೆ.

ಚುನಾವಣೆಯ ಮೇಲೆ ಕಣ್ಣಿಟ್ಟು ಪ್ರಧಾನಿ ಮೋದಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆಯೇ ಹೊರತು, ರೈತರ ಮೇಲಿನ ಕಾಳಜಿಯಿಂದಲ್ಲ -ಸೀತಾರಾಂ ಯಚೂರಿ, ಸಿಪಿಎಂ ಪ್ರ.ಕಾರ್ಯದರ್ಶಿ
ಹಿಂಪಡೆದಿರುವುದು ನಿಮಗೆ ನಿರಾಶೆ ತಂದಿದೆಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...