ಹುಬ್ಬಳ್ಳಿ: ಕೋವಿಡ್ ಲಸಿಕೆ ಪಡೆಯಲು ಜಿಲ್ಲಾಡಳಿತದಿಂದ ಮುಚ್ಚಳಿಕೆ ಬರೆಸಿಕೊಂಡ!

Update: 2021-11-29 06:08 GMT

ಹುಬ್ಬಳ್ಳಿ, ನ.29: ಕೋವಿಡ್-19 ತಡೆ ಲಸಿಕೆ ಸ್ವೀಕರಿಸಲು ಹಿಂಜರಿದ ವ್ಯಕ್ತಿಯೋರ್ವ ಬಳಿಕ ‘ಕೋವಿಡ್‌ ಲಸಿಕೆಯಿಂದ ಆರೋಗ್ಯಕ್ಕೇನಾದರೂ ಸಮಸ್ಯೆಯಾದರೆ ನಾವೇ ಜವಾಬ್ದಾರಿ’ ಎಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ನಿಂದ ಮುಚ್ಚಳಿಕೆ ಬರೆಸಿಕೊಂಡು ಲಸಿಕೆ ಪಡೆದ ಅಪರೂಪದ ಪ್ರಸಂಗ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ರವಿವಾರ ನಡೆದಿದೆ.

 ಲಸಿಕೆ ಪಡೆಯುವ ಕುರಿತು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್ ನೇತೃತ್ವದಲ್ಲಿ ರವಿವಾರ ಧಾರ್ಮಿಕ ಮುಖಂಡರ ಸಭೆ ಕರೆಯಲಾಗಿತ್ತು. ಈ ವೇಳೆ 'ಕೋವಿಡ್ ಲಸಿಕೆ ಪಡೆಯುವ ಕುರಿತು ಭಯವಾಗುತ್ತಿದೆ. ಅದನ್ನು ಸ್ವೀಕರಿಸಿ ಆರೋಗ್ಯದಲ್ಲಿ ಸಮಸ್ಯೆಯಾದರೆ ಯಾರು ಹೊಣೆ?’ ಎಂದು ಯಲ್ಲಾಪುರ ಓಣಿ ನಿವಾಸಿ ಆನಂದ ಕೊನ್ನೂರಕರ ಎಂಬವರು ಆತಂಕ ವ್ಯಕ್ತಪಡಿಸಿದರು.

‘ಕುಟುಂಬ ಸದಸ್ಯರು ಈಗಾಗಲೇ ಲಸಿಕೆ ಪಡೆದಿದ್ದಾರೆ. ನಾನು ಲಸಿಕೆ ಪಡೆದು ಅದರಿಂದ ನನಗೇನಾದರೂ  ಹೆಚ್ಚು ಕಡಿಮೆಯಾದರೆ ಎನ್ನುವ ಭಯ ಕಾಡುತ್ತಿದೆ. ಏನಾದರೂ ಆದರೆ ಕುಟುಂಬದ ಗತಿಯೇನು? ಆದ್ದರಿಂದ ಜಿಲ್ಲಾಡಳಿತವೇ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಮುಚ್ಚಳಿಕೆ ಬರೆದುಕೊಡಬೇಕು’ಎಂದು ಆಗ್ರಹಿಸಿದರು.

ಅವರ ಆತಂಕದ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಹೇಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ್‌ ‘ಲಸಿಕೆಯಿಂದ ಅಡ್ಡ ಪರಿಣಾಮ ಅಥವಾ ದುಷ್ಪರಿಣಾಮ ಉಂಟಾದರೆ ನಾವು ಜವಾಬ್ದಾರಿ ವಹಿಸಿಕೊಳ್ಳುತ್ತೇವೆ’ಎಂದು ಮುಚ್ಚಳಿಕೆ ಬರೆದು, ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಉಪ ವಿಭಾಗಾಧಿಕಾರಿಯ ಸಹಿ ಜೊತೆ ತಮ್ಮ ಸಹಿ ಹಾಕಿ ಆನಂದ ಕೊನ್ನೂರಕರರಿಗೆ ನೀಡಿದರು. ಅಲ್ಲದೆ, ಅಲ್ಲಿಯೇ ಆನಂದ ಅವರಿಗೆ ಕೋವ್ಯಾಕ್ಸಿನ್‌ ಲಸಿಕೆ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News