ಬೇಲೂರು: ಬಿಕ್ಕೋಡು ಚರ್ಚ್ ನಲ್ಲಿ ಪ್ರಾರ್ಥನೆಗೆ ಸಂಘ ಪರಿವಾರದಿಂದ ಅಡ್ಡಿ; ಆರೋಪ

Update: 2021-11-29 06:56 GMT
ಪ್ರಾರ್ಥನೆಗೆ ಅಡ್ಡಿಪಡಿಸಿದವರನ್ನು ಚರ್ಚಿನಲ್ಲಿದ್ದವರು ತರಾಟೆಗೈದರು.

ಹಾಸನ, ನ.29: ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಚರ್ಚಿಗೆ ನುಗ್ಗಿ ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆ ಬೇಲೂರು ಪಟ್ಟಣದ ಬಿಕ್ಕೋಡು ಎಂಬಲ್ಲಿ ನಡೆದಿರುವುದು ವರದಿಯಾಗಿದೆ.

ಬಿಕ್ಕೋಡು ಚರ್ಚ್ ನಲ್ಲಿ ರವಿವಾರ ಬೆಳಗ್ಗೆ ವಿಶೇಷ ಪೂಜೆ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಆಗಮಿಸಿದ ಸಂಘಪರಿವಾರದ ಕಾರ್ಯಕರ್ತರು ಇಲ್ಲಿ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಪ್ರಾರ್ಥನೆಗೆ ಅಡ್ಡಿಪಡಿಸಿದರೆನ್ನಲಾಗಿದೆ. ಈ ವೇಳೆ ಚರ್ಚ್ ನಲ್ಲಿದ್ದವರು "ತಮ್ಮನ್ನು ಯಾರೂ ಇಲ್ಲಿಗೆ ಬಲವಂತವಾಗಿ ಕರೆತಂದಿಲ್ಲ, ನಮ್ಮಿಷ್ಟದಂತೆ ಆಗಮಿಸಿದ್ದೇವೆ" ಎಂದು ಸ್ಪಷ್ಟಪಡಿಸಿದರೂ ಸಂಘಪರಿವಾರದ ಕಾರ್ಯಕರ್ತರು ಅದಕ್ಕೆ ಕಿವಿಗೊಡಲೇ ಇಲ್ಲ ಎಂದು ಆರೋಪಿಸಲಾಗಿದೆ.

ಈ ವೇಳೆ ಉಭಯ ಕಡೆಯವರ ನಡುವೆ ಮಾತಿಕ ಚಕಮಕಿ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

‘ಚರ್ಚ್‌ನಲ್ಲಿ ಯಾವುದೇ ರೀತಿಯ ಮತಾಂತರ ನಡೆಯುತ್ತಿಲ್ಲ. ಪ್ರಾರ್ಥನೆ ಮಾಡುತ್ತಿರುವಾಗ ಕೆಲವರು ಏಕಾಏಕಿ ಒಳಗೆ ನುಗ್ಗಿ ಭಯದ ವಾತಾವರಣ ಸೃಷ್ಟಿಸಿದರು’ಎಂದು ಚರ್ಚ್ ವ್ಯವಸ್ಥಾಪಕ ಸುರೇಶ್ ಪಾಲ್‌ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News