ಚಾಮರಾಜನಗರ: ಪ್ರಯಾಣಿಕರ ಕೋವಿಡ್ ನೆಗಟಿವ್ ವರದಿ ಇಲ್ಲದೆ ರಾಜ್ಯದೊಳಗೆ ಬಂದ ಕೇರಳ ಸರ್ಕಾರಿ ಬಸ್ ವಾಪಸ್

Update: 2021-11-30 05:12 GMT

ಚಾಮರಾಜನಗರ : ಕೇರಳದಿಂದ ಕರ್ನಾಟಕ ರಾಜ್ಯದೊಳಗೆ ಆರ್ ಟಿಪಿಸಿಆರ್ ನೆಗಟಿವ್ ವರದಿ ಇಲ್ಲದೆ ಬಂದ ಕೇರಳ ಸರ್ಕಾರಿ ಬಸ್ ನ್ನು ವಾಪಸ್ಸು ಕಳುಹಿಸಿದ ಘಟನೆ ಕರ್ನಾಟಕ ಕೇರಳ ಗಡಿ ಮೂಲೆಹೊಳೆ ಚಕ್ ಪೋಸ್ಟ್ ನಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೂಲೆಹೊಳೆ ಚಕ್ ಪೋಸ್ಟ್ ನಲ್ಲಿ ಚಾಮರಾಜನಗರ ಜಿಲ್ಲಾಡಳಿತ ಕಟ್ಟಪ್ಪಣೆ ಮಾಡಿದ್ದ ಹಿನ್ನಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಚಕ್ ಪೋಸ್ಟ್ ಸಿಬ್ಬಂದಿಗಳು ಕೇರಳದಿಂದ ಬರುವ ವಾಹನಗಳನ್ನು ಹದ್ದಿನ ಕಣ್ಣಿನಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.

ಕೇರಳದಿಂದ ಬರುವ ಎಲ್ಲಾ ಖಾಸಗಿ ವಾಹನಗಳು ಮತ್ತು ಸರ್ಕಾರಿ ವಾಹನ ಬಸ್ ಗಳನ್ನು ಸಹ ತೀವ್ರತರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಈ ನಡುವೆ ಕೇರಳದಿಂದ ಬಂದ ಕೇರಳದ ಕೆೆೆೆಎಸ್ಸಾರ್ಟಿಸಿ ಬಸ್ ನಲ್ಲಿ ಕೆಲ ಪ್ರಯಾಣಿಕರು ಆರ್ ಟಿ ಪಿ ಸಿ ಆರ್ ನೆಗಟಿವ್ ವರದಿ ತಂದಿಲ್ಲದ ಹಿನ್ನಲೆಯಲ್ಲಿ ಮೂಲೆಹೊಳೆ ಚಕ್ ಪೋಸ್ಟ್ ನಲ್ಲಿ ತಡೆದು ಹಿಂದಕ್ಕೆ ಕಳುಹಿಸಲಾಯಿತು. ಇದರ ಜೊತೆಗೆ ಕೆಲವು ಕಾರುಗಳಲ್ಲೂ ಸಹ ಪ್ರಯಾಣ ಮಾಡುವವರು ಆರ್ ಟಿ ಪಿ ಸಿ ಆರ್ ನೆಗಟಿವ್ ವರದಿ ತಂದಿಲ್ಲದ ಹಿನ್ನಲೆಯಲ್ಲಿ ಕಾರುಗಳನ್ನು ಹಿಂದಕ್ಕೆ ಕಳುಹಿಸಲಾಯಿತು.

ಕೆಕ್ಕನಹಳ್ಳ ಚಕ್ ಪೋಸ್ಟ್ ಗೆ ಜಿಲ್ಲಾಧಿಕಾರಿ ಭೇಟಿ : ಕರ್ನಾಟಕ ತಮಿಳುನಾಡು ಗಡಿ ಚಕ್ ಪೋಸ್ಟ್ ಕೆಕ್ಕನಹಳ್ಳಕ್ಕೆ ಸೋಮವಾರ ಮುಂಜಾನೆ ಭೇಟಿ ಕೊಟ್ಟ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೊಮಲ್ ರವರು ಅಂತರಾಜ್ಯ ಗಡಿ ಚಕ್ ಪೋಸ್ಟ್ ನಲ್ಲಿ ಕೋವಿಡ್ ಸೊಂಕಿತರ ಬಗ್ಗೆ ಪರಿಶೀಲನೆ ಹೇಗೆ ನಡೆಯುತ್ತಿದೆ ಎನ್ನುವ ಮಾಹಿತಿ ಪಡೆದು, ಯಾವುದೇ ಕಾರಣಕ್ಕೂ ನೆರೆ ರಾಜ್ಯದಿಂದ ರಾಜ್ಯದೊಳಗೆ ಪ್ರವೇಶ ಮಾಡುವವರು ಆರ್ ಟಿ ಪಿಸಿಆರ್ ನೆಗಟಿವ್ ವರದಿ ಇರಬೇಕು ಹಾಗೂ ಎರಡು ಡೋಸ್ ಕೋವಿಡ್ ನಿಯಂತ್ರಣ ಲಸಿಕೆ ಹಾಕಿಸಿರಬೇಕು ಇಲ್ಲದಿದ್ದರೆ ರಾಜ್ಯದೊಳಗೆ ಪ್ರವೇಶ ಮಾಡುವಂತಿಲ್ಲ ಈ ನಿಟ್ಟಿನಲ್ಲಿ ತನಿಖಾ ಸಿಬ್ಬಂದಿಗಳು ಕಟ್ಟೆಚ್ಚರ ವಹಿಸುವಂತೆ ಸೂಚನೆ ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News