ಚಿಕ್ಕಮಗಳೂರು ನಗರಸಭೆ ಸದಸ್ಯರ ಅವಧಿ ಪೂರ್ಣಗೊಂಡು ಮೂರು ವರ್ಷಗಳ ಬಳಿಕೆ ನಡೆಯಲಿದೆ ಚುನಾವಣೆ

Update: 2021-11-29 18:16 GMT

ಚಿಕ್ಕಮಗಳೂರು, ನ.29: ಅವಧಿ ಮುಕ್ತಾಯಗೊಂಡಿದ್ದರೂ ನಗರಸಭೆ ವ್ಯಾಪ್ತಿಯ ವಾರ್ಡ್‍ಗಳ ಮೀಸಲಾತಿ ಕರಡು ಸಂಬಂಧ ನ್ಯಾಯಾಲದಲ್ಲಿ ದಾವೆ ಸಲ್ಲಿಸಿದ್ದ ಪರಿಣಾಮ ಕಳೆದ ಮೂರು ವರ್ಷಗಳಿಂದ ಇಲ್ಲಿನ ನಗರಸಭೆಗೆ ಚುನಾವಣೆ ವಿಳಂಬವಾಗಿದ್ದು, ಶೀಘ್ರ ಚುನಾವಣೆ ನಡೆಸಬೇಕೆಂದು ವಿರೋಧ ಪಕ್ಷಗಳ ತೀವ್ರದ ಹಿನ್ನೆಲೆಯಲ್ಲಿ ಕೊನೆಗೂ ರಾಜ್ಯದ ಚುನಾವಣಾ ಆಯೋಗ ನಗರಸಭೆ ಸಭೆ ಚುನಾವಣೆಗೆ ಹಸಿರು ನಿಶಾನೆ ತೋರಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ನಗರಸಭೆಗೆ ಡಿ.29ರಂದು ಚುನಾವಣೆ ನಿಗದಿ ಪಡಿಸಿ ಚುನಾವಣಾ ಆಯೋಗ ಸೋಮವಾರ ಆದೇಶ ಹೊರಡಿಸಿದ್ದು, ಡಿ.15ರಂದು ಬುಧವಾರ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊಡೆಯ ದಿನವಾಗಿದೆ. ಡಿ.16 ಗುರುವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.18ರಂದು ಶನಿವಾರ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.27ರಂದು ಸೋಮವಾರ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚಿಕ್ಕಮಗಳೂರು ನಗರಸಭೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಡಿ.29ರಂದು ಬುಧವಾರ ಅಗತ್ಯವಿದ್ದಲ್ಲಿ ಮರು ಮತದಾನ ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. 

ಡಿ.30ರಂದು ಗುರುವಾರ ಚಿಕ್ಕಮಗಳೂರು ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8ರಿಂದ ನಗರಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಡಿ.30 ಗುರುವಾರ ನಗರಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಚಿಕ್ಕಮಗಳೂರು ನಗರಸಭೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಡಿ.8ರಂದು ನಗರಸಭೆ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಲಿದ್ದಾರೆ. 

ಚಿಕ್ಕಮಗಳೂರು ನಗರಸಭೆ ಚುನಾವಣೆ ವಿಳಂಬದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಮುಖಂಡರು ಆರಂಭದಿಂದಲೂ ಆಡಳಿತ ಪಕ್ಷ ಬಿಜೆಪಿ ಹಾಗೂ ಕ್ಷೇತ್ರದ ಶಾಸಕ ಸಿ.ಟಿ.ರವಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ನಗರದಲ್ಲಿ ಬಿಜೆಪಿ ವಿರೋಧಿ ಅಲೆಯ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಸ್ಥಳೀಯ ಮುಖಂಡರು ನಗರಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ನಗರಸಭೆಯ ವಿವಿಧ ವಾರ್ಡ್‍ಗಳ ಮೀಸಲಾತಿ ಕರಡು ಸಂಬಂಧ ಪದೇ ಪದೇ ನ್ಯಾಯಾಲಯದಲ್ಲಿ ದಾವೆ ಸಲ್ಲಿಸುತ್ತಾ ಚುನಾವಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬವಾಗುವಂತೆ ಮಾಡುತ್ತಿದ್ದಾರೆ. ನಗರಸಭೆ ಅವಧಿ ಪೂರ್ಣಗೊಂಡು 3 ವರ್ಷ ಕಳೆದರೂ ನಗರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದೇ ಅಧಿಕಾರ ದರ್ಬಾರು ನಡೆಯುತ್ತಿದೆ.  ಸಾರ್ವಜನಿಕರನ್ನು ಸತಾಯಿಸಲಾಗುತ್ತಿದೆ. ಸರಕಾರದ ಅನುದಾನಗಳ ಸದ್ಬಳಕೆ ಆಗುತ್ತಿಲ್ಲ. ಗುತ್ತಿಗೆದಾರರು, ಅಧಿಕಾರಿಗಳು ಹಾಗೂ ಸಿ.ಟಿ.ರವಿ ಹಿಂಬಾಲಕರು ಸರಕಾರದ ಅನುದಾನವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ವ್ಯಾಪಕ ಆರೋಪ, ಪ್ರತಿಭಟನೆಗಳನ್ನೂ ಮಾಡಿದ್ದರು.

ಅಂತೂ ಚಿಕ್ಕಮಗಳೂರು ನಗರಸಭೆ ಚುನಾವಣೆ ಘೋಷಣೆಯಾಗಿದ್ದು, ನಗರದ ಜನತೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನಿಟ್ಟುಸಿರು ಬಿಡುವಂತಾಗಿದೆ. ಹಿಂದಿನ ನಗರಸಭೆ ಜನಪ್ರತಿನಿಧಿಗಳ ಅವಧಿ 2018ಕ್ಕೆ ಪೂರ್ಣಗೊಂಡಿತ್ತು. ಮೀಸಲಾತಿ ಸಂಬಂಧ ಸ್ಪರ್ಧಾ ಆಕಾಂಕ್ಷಿಗಳು ನ್ಯಾಯಾಲಯದ ಮೋರೆ ಹೋಗಿದ್ದರಿಂದ ಮೂರು ವರ್ಷಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಸೋಮವಾರ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿರುವುದರಿಂದ ನಗರಸಭೆ ಚುನಾವಣೆ ಎದುರು ನೋಡುತ್ತಿದ್ದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಸಿಪಿಐ, ಬಿಎಸ್ಪಿ ಪಕ್ಷಗಳಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಚುನಾವಣಾ ತಯಾರಿ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಚಿಕ್ಕಮಗಳೂರು ನಗರಸಭೆ 35 ವಾರ್ಡ್‍ಗಳನ್ನು ಹೊಂದಿದ್ದು, ರಾಜ್ಯ ಚುನಾವಣಾ ಆಯೋಗ ಮೀಸಲಾತಿ ನಿಗದಿಪಡಿಸಿ 3 ಬಾರಿ ಕರಡು ಪ್ರಕಟಿಸಿತ್ತು. ಆದರೆ ಮೂರು ಬಾರಿಯೂ ವೀಸಲು ಕರಡು ವಿರುದ್ಧ ನ್ಯಾಯಾಲಯದ ಮೋರೆ ಹೋಗಿದ್ದರು. ಪರಿಣಾಮ ನಗರಸಭೆ ಚುನಾವಣೆಯನ್ನು ಪದೇ ಪದೇ ಮುಂದೂಡಲಾಗಿತ್ತು. ರಾಜ್ಯ ಉಚ್ಚ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಪರಿಷ್ಕøತ ವಾರ್ಡ್‍ವಾರು ಮೀಸಲಾತಿಯನ್ನು ಆಯೋಗಕ್ಕೆ ನ.26ರೊಳಗೆ ಒದಗಿಸುವಂತೆ ಹಾಗೂ ಡಿ.30ರೊಳಗೆ ಅವಧಿ ಮುಕ್ತಾಯಗೊಂಡಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News