ಖ್ಯಾತ ಫ್ಯಾಶನ್ ವಿನ್ಯಾಸಗಾರ ವಿರ್ಜಿಲ್ ಅಬ್ಲೊ ನಿಧನ

Update: 2021-11-29 18:36 GMT
    ವಿರ್ಜಿಲ್ ಅಬ್ಲೊ( photo:twitter/@gucci)

ಪ್ಯಾರಿಸ್, ನ.29: ಖ್ಯಾತ ಫ್ಯಾಶನ್ ವಿನ್ಯಾಸಗಾರ ವಿರ್ಜಿಲ್ ಅಬ್ಲೊ ರವಿವಾರ ನಿಧನರಾಗಿದ್ದಾರೆ. 41 ವರ್ಷದ ಅಬ್ಲೋ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಫ್ರಾನ್ಸ್‌ನ ಪ್ರಸಿದ್ಧ ಫ್ಯಾಶನ್ ಸಂಸ್ಥೆ ಎಲ್‌ವಿಎಂಎಚ್ ಹೇಳಿದೆ.

ಲೂಯಿಸ್ ವ್ಯೆಟನ್ ಸಂಸ್ಥೆಯ ಪುರುಷರ ಉಡುಪು ಸಂಗ್ರಹದ ಕಲಾತ್ಮಕ ನಿರ್ದೇಶಕರಾಗಿ ಖ್ಯಾತಿ ಪಡೆದಿದ್ದ ಅಬ್ಲೋ ಅಮೆರಿಕ ಮೂಲದವರು. ಘಾನಾದ ವಲಸಿಗ ದಂಪತಿಯ ಪುತ್ರನಾದ ಅಬ್ಲೋ ಡಿಜೆ (ಸಂಗೀತಕಾರ)ನಾಗಿಯೂ ಕೆಲಸ ಮಾಡಿದ್ದರು. ಕಾನ್ಯೆ ವೆಸ್ಟ್ ಎಂಬ ಮೂಲ ಹೆಸರಿನ ರ್ಯಾಪ್ ಸಂಗೀತಗಾರ ಮತ್ತು ಫ್ಯಾಶನ್ ಡಿಸೈನರ್ ಯೆ ಜತೆ ಕಾರ್ಯ ನಿರ್ವಹಿಸಿದ್ದ ಅಬ್ಲೋ, ಬಳಿಕ ಇಟಲಿಯ ಐಷಾರಾಮಿ ಉಡುಪುಗಳ ಸಂಸ್ಥೆ ‘ಆಫ್ ವೈಟ್’  ಅನ್ನು ಸ್ಥಾಪಿಸಿದ್ದರು. 2018ರಿಂದ ಲೂಯಿಸ್ ವ್ಯೆಟನ್ ಜತೆ ಕೆಲಸ ಮಾಡುತ್ತಿದ್ದರು.

ವ್ಯೆಟನ್ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಿದ್ದ ಸಂದರ್ಭ ತಮ್ಮ ಕಾರ್ಯದಲ್ಲಿ ಸಾಮಾಜಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾಳಜಿಯನ್ನು ತೋರಿಸುತ್ತಿದ್ದರು. ‘ಅಬ್ಲೋ ಮೃತಪಟ್ಟ ಭಯಾನಕ ಸುದ್ಧಿ ಕೇಳಿ ನಮಗೆಲ್ಲಾ ಆಘಾತವಾಗಿದೆ. ಅವರೊಬ್ಬ ವಿನ್ಯಾಸಗಾರ ಮಾತ್ರವಲ್ಲ, ಓರ್ವ ದಾರ್ಶನಿಕ ಹಾಗೂ ಮಹಾನ್ ಬುದ್ಧಿವಂತ ವ್ಯಕ್ತಿಯಾಗಿದ್ದರು’   ಎಂದು ಎಲ್‌ವಿಎಂಎಚ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರ್ನಾರ್ಡ್ ಅರ್ನಾಲ್ಟ್ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ನಡೆದಿದ್ದ ತಮ್ಮ ಕಾರ್ಯಕ್ರಮದಲ್ಲಿ ಜನಾಂಗೀಯ ತಾರತಮ್ಯ ಮತ್ತು ತೃತೀಯ ಲಿಂಗಿಗಳ ವಿರುದ್ಧದ ತಾರತಮ್ಯವನ್ನು ವಿರೋಧಿಸುವ ಸಂದೇಶ ಪ್ರಸ್ತುತಪಡಿಸಿದ್ದರು.

ಅಬ್ಲೋ ನಿಧನಕ್ಕೆ ಸಂತಾಪ ಸೂಚಿಸಿ ವಿಶ್ವದಾದ್ಯಂತ ಜನರು ಶೃದ್ಧಾಂಜಲಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News