ಸೋಮವಾರಪೇಟೆ: ವಿದ್ಯಾರ್ಥಿಗಳ ಮೇಲೆ ನಾಯಿ ದಾಳಿ; ಆಸ್ಪತ್ರೆಗೆ ದಾಖಲು

Update: 2021-11-30 17:59 GMT

ಮಡಿಕೇರಿ ನ.30 : ಶಾಲಾ ವಿದ್ಯಾರ್ಥಿಗಳ ಮೇಲೆ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಪುಟಾಣಿಗಳಿಬ್ಬರು ಆಸ್ಪತ್ರೆ ಸೇರಿದ ಘಟನೆ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ.

ಇಂದು ಬೆಳಗ್ಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆವರಣದಲ್ಲಿ  ಪ್ರಾರ್ಥನೆಗೆ ಸಜ್ಜಾಗುತ್ತಿದ್ದ ವೇಳೆ ನಾಯಿಯೊಂದು ಏಕಾಏಕಿ ಮಕ್ಕಳ ಮೇಲೆ ದಾಳಿ ನಡೆಸಿ ಸಿಕ್ಕಿದವರನ್ನು ಕಚ್ಚ ಲಾರಂಭಿಸಿತು. ಈ ಅನಿರೀಕ್ಷಿತ ಘಟನೆಯಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಸಿಕ್ಕ ಸಿಕ್ಕ ಕಡೆ ಒಡಲಾರಂಭಿಸಿದರು.

ಆದರೂ ಬಿಡದ ನಾಯಿ ಮೂರನೇ ತರಗತಿಯಕಿಶನ್ ಹಾಗೂ ಒಂದನೇ ತರಗತಿಯ ಧ್ವನಿ ಎಂಬ ವಿದ್ಯಾರ್ಥಿಗಳ ಕಾಲು ಮತ್ತು ತೊಡೆಯ ಭಾಗಕ್ಕೆ ಕಚ್ಚಿದೆ ಎಂದು ತಿಳಿದು ಬಂದಿದೆ.

ನಾಯಿದಾಳಿಗೆ ಸಿಲುಕಿದ ಮಕ್ಕಳನ್ನು ರಕ್ಷಿಸಲು ಶಿಕ್ಷಕಿಯರು ಹರಸಾಹಸ ಪಡಬೇಕಾಯಿತು. ಗಾಯಗೊಂಡ  ಪುಟಾಣಿಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಈ ಬಗ್ಗೆ ಶಾಲಾ ಮುಕ್ಯೋಪಾಧ್ಯಾಯಿನಿ       ಮಿಲ್ಡ್ರೆಡ್ ಗೊನ್ಸಾಲ್ವೆಸ್ ಪೊಲೀಸ್ ಹಾಗೂ ಪಟ್ಟಣ ಪಂಚಾಯ್ತಿಗೆ ದೂರು ನೀಡಿದ್ದಾರೆ.

ಇದೇ ನಾಯಿ ಇಂದು ಬೆಳಗ್ಗೆ ಕಕ್ಕೆಹೊಳೆ ಸಮೀಪ ಇಬ್ಬರಿಗೆ ಹಾಗೂ ಸರ್ಕಾರಿ ಪದವಿಪೂರ್ವಕಾಲೇಜು ಸಮೀಪ ಇಬ್ವರಿಗೆ ಸೇರಿದಂತೆ ಒಟ್ಟು ಆರು ಮಂದಿಗೆ ಕಚ್ಚಿದೆ. ನಾಲ್ಕೈದು ನಾಯಿಗಳ ಮೇಲೂ ದಾಳಿ ನಡೆಸಿ ಗಾಯಗೊಳಿಸಿದೆ ಎಂದು ತಿಳಿದು ಬಂದಿದೆ.

ಪಟ್ಟಣ ಪಂಚಾಯತ್ ಅಧ್ಯಕ್ಷ ಚಂದ್ರು, ಸದಸ್ಯರಾದ ಶೀಲಾ ಡಿಸೋಜ, ಮಹೇಶ್ ಹಾಗೂ ಎಸ್.ಮಹೇಶ್ ಮುಖ್ಯಾಧಿಕಾರಿ ನಾಚಪ್ಪ ಆಸ್ಪತ್ರೆಗೆ ತೆರಳಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಪಟ್ಟಣದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದರು. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News