ಪೇಜಾವರ ಶ್ರೀ ಕುರಿತು ಹೇಳಿಕೆ: ಹಂಸಲೇಖ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

Update: 2021-11-30 11:14 GMT

ಬೆಂಗಳೂರು, ನ.30: ಪೇಜಾವರ ಶ್ರೀಗಳ ಬಗ್ಗೆ ನೀಡಿದ್ದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಹಂಸಲೇಖ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ತನಿಖೆಗೆ ತಡೆ ನೀಡಿ ಆದೇಶಿಸಿದೆ.

ಹಂಸಲೇಖ ಅವರ ಪರ ವಕೀಲರಾದ ಕಾಶೀನಾಥ್ ಮತ್ತು ಸಿ.ಎಸ್.ದ್ವಾರಕಾನಾಥ್ ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.

ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸ್ಪೃಶ್ಯತೆ ಕುರಿತು ಮಾತನಾಡುವ ವೇಳೆ, ಪೇಜಾವರ ಶ್ರೀಗಳ ದಲಿತ ಕೇರಿ ಭೇಟಿ ಕುರಿತು ಮಾತನಾಡಿದ್ದರು. ಈ ವೇಳೆ ಅವರು, ‘ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ ಮಾಡಲು ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿತ್ತು. ನಿಜಾನಾ?! ದಲಿತರ ಮನೆಗೆ ಹೋಗಿ ಕೂತಿದ್ದರಂತೆ. ಕುಳಿತುಕೊಳ್ಳೋದಕ್ಕೆ ಆಗುತ್ತಷ್ಟೇ. ಅವರು ಕೋಳಿ ಕೊಟ್ಟರೆ ತಿನ್ನಕ್ ಆಗುತ್ತಾ? ಕೋಳಿ ಬೇಡ ಕುರಿ ರಕ್ತ ಫ್ರೈ ಮಾಡಿಕೊಟ್ಟರೆ ತಿಂತಾರಾ? ಲಿವರ್ ತಿಂತಾರಾ? ಸಾಧ್ಯ ಇಲ್ಲ’ ಎಂದು ಹೇಳಿದ್ದರು.

ಮಾತು ಮುಂದುವರಿಸಿ ‘ಅದರರ್ಥ ಅಂದರೆ ದಲಿತರ ಮನೆಗೆ ಬಲಿತರು ಹೋಗಿ ಬರುವುದೇನು ದೊಡ್ಡ ವಿಷ್ಯಾ ಅಂತ ನನಗನ್ನಿಸಿತು. ಈಗ ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಆ ಹೆಣ್ಣಿನ ಜೊತೆ ರಮಿಸ್ತಾನೆ ಅಂದ್ರೆ ಅದರಲ್ಲೇನು ದೊಡ್ಡ ವಿಷ್ಯ ಇದೆ. ಅವನು ಆ ಸೋಲಿಗರ ಹೆಣ್ಣನ್ನ ತನ್ನ ಮನೆಗೆ ಕರೆದುಕೊಂಡು ಹೋಗಿ ತನ್ನ ದೇವರ ಗುಡಿಯಲ್ಲಿ ಕೂರಿಸಿ ಅಲ್ಲಿ ಅವಳನ್ನ ರಮಿಸಿದ್ರೆ ಅದು ಬಿಳಿಗಿರಿಗೊಂದು ಒಳ್ಳೆಯ ಹೆಸರಾಗುತ್ತಿತ್ತು. 

‘ಗಾಂಧಿ ಹೇಳಿದಂತೆ ದಲಿತರ ಮನೆಗೆ ಬಲಿತರು ಬರಬೇಕು. ತಮ್ಮ ಜೊತೆಗೆ ಅವರ ಮನೆಗೆ ಕರೆದುಕೊಂಡು ಹೋಗಬೇಕು. ನಿಮ್ಮ ಮನೆಯಲ್ಲಲ್ಲ ಊಟ ನಮ್ಮನೇಲಿ ಊಟ, ನಮ್ಮನೆ ಲೋಟ ನೀನು ಮುಟ್ಟು. ನೀ ಕುಡಿದದನ್ನ ನಾವು ತೊಳಿತೀವಿ ಅಂತ ಅವರು ಹೇಳಬೇಕು. ಅದು ನಿಜವಾದ ಕ್ಷಣ.’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News