ಎಸ್.ಎಲ್.ಭೈರಪ್ಪ ‘ಓರ್ವ ಸಾಮಾಜಿಕ ವಂಚಕ': ಡಾ.ಎಚ್.ಸಿ.ಮಹದೇವಪ್ಪ

Update: 2021-11-30 12:30 GMT

ಬೆಂಗಳೂರು, ನ. 30: ‘ತಮ್ಮ ಪಂಚೇಂದ್ರಿಯಗಳನ್ನು ಕಳೆದುಕೊಂಡು ಮಾತನಾಡುತ್ತಿರುವ ಲೇಖಕ ಎಸ್.ಎಲ್.ಭೈರಪ್ಪನವರು ಭಾರತವನ್ನು ಭಿಕ್ಷುಕ ರಾಷ್ಟ್ರ ಎಂದು ಕರೆದಿರುವುದು ಬೇಸರದ ಸಂಗತಿ. ಸಾಹಿತ್ಯದ ಆಶಯಗಳಿಗೆ ತದ್ವಿರುದ್ಧವಾಗಿ ಮಾತನಾಡುತ್ತಿರುವ ಭೈರಪ್ಪನವರ ಮಾತುಗಳ ಬಗ್ಗೆ ನನಗಂತೂ ಯಾವುದೇ ಅಚ್ಚರಿಯಿಲ್ಲ. ಕಾರಣ ಅವರು ಬೆಳೆದು ಬಂದಿರುವ ಸಾಮಾಜಿಕ ಹಿನ್ನಲೆಯ ಮಹಿಮೆಯೇ ಹೀಗಿದೆ' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಾನು ಬದುಕಿದ್ದ ದೇಶದ ಇತಿಹಾಸವನ್ನೇ ಅರಿಯದ ಸಾಹಿತಿಯೊಬ್ಬರು ನೇರವಾಗಿ ತನ್ನ ದೇಶವನ್ನು ‘ಭಿಕ್ಷುಕ ರಾಷ್ಟ್ರ' ಎಂದು ಕರೆಯಬೇಕಾದರೆ ಆತ ಯಾವುದೋ ಗಂಭೀರ ಮಾನಸಿಕ ಖಾಯಿಲೆಯಿಂದ ಬಳಲುತ್ತಿರಬಹುದು ಎಂದೇ ನನಗೆ ಅನಿಸುತ್ತದೆ' ಎಂದು ಇದೇ ವೇಳೆ ಸಂಶಯ ವ್ಯಕ್ತಪಡಿಸಿದ್ದಾರೆ.

‘ದೇಶದ ಹಿಂದಿನ ಸಾಲದ ಪ್ರಮಾಣಕ್ಕೆ ಹೋಲಿಸಿದರೆ ಈಗ ಅದು ಬಹಳಷ್ಟು ಹೆಚ್ಚಾಗಿದೆ. ಈ ಸಂಗತಿಯನ್ನು ಅರಿಯದ ಭೈರಪ್ಪನವರು ಅನಗತ್ಯವಾಗಿ ನೆಹರೂ ಹೆಸರನ್ನು ಎಳೆದು ತಂದಿರುವುದರ ಹಿಂದೆ ‘ಮನುವಾದಿ ಸರಕಾರ'ವನ್ನು ಬೆಂಬಲಿಸುವ ಅವರ ಬೌದ್ಧಿಕ ಕುತಂತ್ರ ಅಡಗಿದೆಯೇ ವಿನಃ ಸಾಮಾಜಿಕ ನ್ಯಾಯ ಸಾಧನೆಗೆ ಪೂರಕವಾದ ಯಾವ ಅಂಶವೂ ಅಲ್ಲಿಲ್ಲ' ಎಂದು ಮಹದೇವಪ್ಪ ಲೇವಡಿ ಮಾಡಿದ್ದಾರೆ.

‘ಬೆಲೆ ಏರಿಕೆ, ಆರ್ಥಿಕ ಮುಗ್ಗಟ್ಟು ಮತ್ತು ನರೇಂದ್ರ ಮೋದಿ ಸರಕಾರದ ದುರಾಡಳಿತದಲ್ಲಿ ಜನ ಸಾಮಾನ್ಯರು ಅತೀವವಾಗಿ ಸಂಕಷ್ಟ ಅನುಭವಿಸುತ್ತಿರುವುದು ಗೊತ್ತಿದ್ದರೂ ಮಾತನಾಡಲು ಸುಳ್ಳನ್ನೇ ಆಯ್ಕೆ ಮಾಡಿಕೊಳ್ಳುವ ಭೈರಪ್ಪನವರು ಓರ್ವ ಸಾಮಾಜಿಕ ವಂಚಕ!' ಎಂದು ಮಹದೇವಪ್ಪ ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News