ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ: ಮಾಜಿ ಸಚಿವ ಶಿವರಾಜ್ ತಂಗಡಗಿ

Update: 2021-11-30 12:43 GMT

ಕೊಪ್ಪಳ, ನ. 30: ‘ವಿಧಾನ ಪರಿಷತ್ ಚುನಾವಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬದಲಾವಣೆಯಾಗಲಿದ್ದಾರೆ. ಅದನ್ನು ಬಿಜೆಪಿ ಹೈಕಮಾಂಡ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮೂಲಕ ಹರಿಯಬಿಟ್ಟಿದ್ದಾರೆ' ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈಗಾಗಲೇ ಒಮ್ಮೆ ನಾನು ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುತ್ತಾರೆಂದು ಹೇಳಿದ್ದೇನೆ. ಅವರಲ್ಲಿ ಒಡಕಿದೆ, ಒಗ್ಗಟ್ಟಿಲ್ಲ. ಸಿಎಂ ಬದಲಾವಣೆ ನಿಶ್ಚಿತವಾಗಿದ್ದು, ಈ ಕುರಿತು ಯಾವುದೇ ರೀತಿಯಲ್ಲಿಯೂ ಆಶ್ಚರ್ಯ ಪಡಬೇಕಾಗಿಲ್ಲ' ಎಂದು ಹೇಳಿದರು.

‘ನನಗೆ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಅಭಿಮಾನವಿದೆ. ಆದರೆ, ಸಿಎಂ ಬದಲಾವಣೆ ಬಗ್ಗೆ ಬಿಜೆಪಿಗರು ಈಗಾಗಲೇ ನಿರ್ಧಾರ ಮಾಡಿದ್ದಾರೆ ಎಂದ ಅವರು, ಕೆ.ಎಸ್.ಈಶ್ವರಪ್ಪ ಮುಖ ನೋಡಿದರೆ ದೊಡ್ಡ ಕುಡುಕರು ಕಂಡಂತೆ ಕಾಣುತ್ತಾರೆ. ಹೀಗಾಗಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಭಯೋತ್ಪಾದಕರನ್ನು ಹುಟ್ಟ ಹಾಕುವ ಪಕ್ಷ ಬಿಜೆಪಿಯೋ ಕಾಂಗ್ರೆಸ್ ಪಕ್ಷವೋ ಎಂಬುದು ಗೊತ್ತಾಗಿದೆ. ಹಿರಿಯ ಸಂಶೋಧಕ ಎಂ.ಎಂ.ಕಲ್ಬುರ್ಗಿ ಕೊಲೆ ಮಾಡಿದ್ದು ಯಾರು? ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಲೆ ಮಾಡಿದ್ದು ಯಾರ ಬೆಂಬಲಿಗರು ಎಂಬುದು ಗೊತ್ತಾಗಿದೆ? ಬಿಜೆಪಿಯವರು ಭಯೋತ್ಪಾದಕರಷ್ಟೇ ಅಲ್ಲ, ಕೊಲೆಗಡುಕರು ಹೌದು ಎಂದು ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News