ಬೆಳೆ ನಷ್ಟ ಪರಿಹಾರ ನೇರವಾಗಿ ರೈತರ ಖಾತೆಗೆ: ಸಚಿವ ಆರ್.ಅಶೋಕ್

Update: 2021-11-30 12:48 GMT

ಬೆಂಗಳೂರು, ನ. 30: ‘ಅಕಾಲಿಕ ಮಳೆ ಬಿದ್ದ ಪರಿಣಾಮ ಉಂಟಾಗಿರುವ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ' ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಇತ್ತೀಚೆಗೆ ರಾಜ್ಯಾದ್ಯಂತ ಸುರಿದ ಅಕಾಲಿಕ ಮಳೆಯಿಂದ ಅಪಾರ ಬೆಳೆ ಮತ್ತು ಆಸ್ತಿ ಹಾನಿ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ತುಮಕೂರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಪ್ರವಾಸ ನಡೆಸಿ ಪರಿಶೀಲನೆ ನಡೆಸಿ ಶೀಘ್ರ ಪರಿಹಾರ ವಿತರಿಸುವ ಭರವಸೆ ನೀಡಲಾಗಿದೆ' ಎಂದರು.

‘ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ಇಂದಿನವರೆಗೆ 3 ಲಕ್ಷ ರೈತರಿಗೆ 226.57 ಕೋಟಿ ರೂ.ಪರಿಹಾರ ವಿತರಿಸಿದ್ದೇವೆ. ಇಂದು 1.61 ರೈತರಿಗೆ 92.30 ಕೋಟಿ ರೂ.ಹಣ ಬಿಡುಗಡೆ ಮಾಡುತ್ತಿದ್ದೇವೆ. ಒಟ್ಟು 4.61 ಲಕ್ಷ ಮಂದಿ ರೈತರಿಗೆ 318.87 ಕೋಟಿ ರೂ.ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಆಗಿದ್ದು, ಮಧ್ಯವರ್ತಿಗಳಿಗೆ ಯಾವುದೇ ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಲಾಗಿದೆ' ಎಂದು ಅವರು ವಿವರಿಸಿದರು.

ಈ ಹಿಂದೆ ಮೂರು ತಿಂಗಳಿಗೊಮ್ಮೆ ಬೆಳೆ ಪರಿಹಾರ ವಿತರಿಸಲಾಗುತ್ತಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣ ಬದಲಾವಣೆ ಮಾಡಿದ್ದು, ಎರಡು-ಮೂರು ದಿನಕ್ಕೆ ಒಮ್ಮೆ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಲಾಗಿದೆ. ಕೇಂದ್ರಕ್ಕೆ ಹೆಚ್ಚಿನ ಪರಿಹಾರ ನೀಡುವಂತೆ ವರದಿ ಸಿದ್ಧಪಡಿಸುತ್ತಿದ್ದೇವೆ. ಬೆಳೆ ಪರಿಹಾರ ನೀಡಲು ರಾಜ್ಯದಲ್ಲಿ ಹಣಕಾಸಿನ ಕೊರತೆ ಇಲ್ಲ. ರೈತರಿಗೆ ಅನುಕೂಲವಾಗಬೇಕು. ರೈತರ ಹಿತ ಕಾಯಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಅಶೋಕ್ ತಿಳಿಸಿದರು.

ಲಾಕ್‍ಡೌನ್ ಇಲ್ಲ: ರಾಜ್ಯದಲ್ಲಿ ಹೊಸ ತಳಿಯ ಓಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸದ್ಯಕ್ಕೆ ಲಾಕ್‍ಡೌನ್ ಇಲ್ಲ. ರಾಜ್ಯದ ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಹೊರ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಎರಡು ಬಾರಿ ಪರೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ನಿರಂತರವಾಗಿ ಕೋವಿಡ್ ಪರಿಸ್ಥಿತಿಯ ಅವಲೋಕನ ಮಾಡುತ್ತಿದೆ. ಹೊರದೇಶದಿಂದ ಬರುವವರನ್ನು ತೀವ್ರ ತಪಾಸಣೆಗೆ ಒಳಪಡಿಸುತ್ತೇವೆ. ಹೊರದೇಶಗಳ ಸ್ಥಿತಿ ನಮ್ಮ ಗಮನದಲ್ಲಿದೆ ಎಂದ ಅವರು, ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ, ಸೋಂಕು ತಡೆಗೆ ಜನರು ಸಹಕರಿಸಬೇಕು ಎಂದು ಅವರು ಇದೇ ವೇಳೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News