ಮಡಿಕೇರಿ: ಅಪ್ರಾಪ್ತೆಗೆ ದ್ವಿಚಕ್ರ ವಾಹನ ನೀಡಿ ಶಿಕ್ಷೆಗೆ ಗುರಿಯಾದ ತಂದೆ

Update: 2021-11-30 12:55 GMT

ಮಡಿಕೇರಿ ನ.30 : ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು 25 ಸಾವಿರ ದಂಡ ಹಾಗೂ ಒಂದು ದಿನದ ಸಜೆಯನ್ನು ನೀಡಿ ಆದೇಶಿಸಿದ್ದಾರೆ. 

ಕುಶಾಲನಗರ ನಂಜರಾಯಪಟ್ಟಣ ನಿವಾಸಿ ಎ.ಜೆ.ಆ್ಯಂಟೋಣಿ ಎಂಬವರು ಜನವರಿ 6 ರಂದು ತಮ್ಮ ಅಪ್ರಾಪ್ತ ವಯಸ್ಸಿನ ಮಗಳಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ್ದರು. ಅಪ್ರಾಪ್ತೆ ಚಲಾಯಿಸುತ್ತಿದ್ದ ಸ್ಕೂಟಿ ವಾಹನ ದುಬಾರೆ ಪೆಟ್ರೋಲ್ ಬಂಕ್ ಬಳಿ ತ್ಯಾಗತ್ತೂರು ನಿವಾಸಿ ಸಮೀರ್ ಎಂಬವರು ಚಲಾಯಿಸುತ್ತಿದ್ದ ಬೈಕ್‍ಗೆ ಢಿಕ್ಕಿಯಾಗಿತ್ತು. ಈ ಘಟನೆ ಕುರಿತು ಸಮೀರ್ ದೂರು ನೀಡಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪಘಾತ ಪ್ರಕರಣವನ್ನು ತನಿಖೆ ನಡೆಸಿದ ಸಂದರ್ಭ ಸ್ಕೂಟಿ ಚಲಾಯಿಸುತ್ತಿದ್ದ ಬಾಲಕಿ 16 ವರ್ಷದವಳೆಂದು ತಿಳಿದು ಬಂದಿತ್ತು. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಿಂದ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಅಪ್ರಾಪ್ತೆ ಬಾಲಕಿ ಹಾಗೂ ಆಕೆಯ ತಂದೆ(ವಾಹನದ ಮಾಟಕರು) ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. 

ಪ್ರಕರಣವನ್ನು ವಿಚಾರಣೆ ನಡೆಸಿದ ಸಿಜೆ. ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರು, ಅಪಘಾತಕ್ಕೆ ಕಾರಣವಾದ ಅಪ್ರಾಪ್ತೆಗೆ ವಾಹನವನ್ನು ಚಲಾಯಿಸಲು ನೀಡಿದ ವ್ಯಕ್ತಿಗೆ 25 ಸಾವಿರ ರೂ. ದಂಡ ವಿಧಿಸಿದೆ. ಮಾತ್ರವಲ್ಲದೇ ಒಂದು ದಿನದ ಸಜೆಯನ್ನು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News