ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕ ಬಿ.ಎಲ್.ಲಕ್ಕೇಗೌಡ ನಿಧನ: ಗಣ್ಯರ ಕಂಬನಿ

Update: 2021-11-30 15:59 GMT

ಬೆಂಗಳೂರು, ನ.30: ರಾಜ್ಯ ಸಹಕಾರ ಪತ್ತಿನ ಸಂಘ, ಭಾರತ್ ಸಮೂಹ ಶಿಕ್ಷಣ ಸಂಸ್ಥೆ, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ ಬಿ.ಎಲ್.ಲಕ್ಕೇಗೌಡ(80) ವಯೋಸಹಜ ಅನಾರೋಗ್ಯದಿಂದಾಗಿ ಬೆಂಗಳೂರಿನಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸೇರಿದಂತೆ ಇನ್ನಿತರ ಗಣ್ಯರು ಲಕ್ಕೇಗೌಡ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಜಯನಗರದಲ್ಲಿರುವ ಭಾರತ್ ಎಜುಕೇಷನ್ ಸೊಸೈಟಿ ಆವರಣದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಬಳಿಕ ಸಂಜೆ 5 ಗಂಟೆಗೆ ಕುಟುಂಬ ಸದಸ್ಯರು, ಬಂಧುಗಳ ಸಮ್ಮುಖದಲ್ಲಿ ಮಾಗಡಿ ಬಳಿಯಿರುವ ಅವರ ತೋಟದಲ್ಲಿ ಲಕ್ಕೇಗೌಡರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

ನಾಡಪ್ರಭು ಕೆಂಪೇಗೌಡ ಕೇಂದ್ರ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಲಕ್ಕೇಗೌಡ, ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. 1971ರಲ್ಲಿ 23 ಸದಸ್ಯರನ್ನು ಒಳಗೊಂಡ ಭಾರತ್ ಎಜುಕೇಷನ್ ಸೊಸೈಟಿ(ಬಿಇಎಸ್) ಆರಂಭಿಸಿದ ಲಕ್ಕೇಗೌಡ ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಕೊಡುಗೆ ಅನನ್ಯವಾದದ್ದು.

ಸಹಕಾರ ಪತ್ತಿನ ಸಂಘ ಹಾಗೂ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ ಮೂಲಕ ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದ ಲಕ್ಕೇಗೌಡರನ್ನು ಸಹಕಾರಿ ಕ್ಷೇತ್ರದ ಧುರೀಣ ಎಂದು ಪರಿಗಣಿಸಲಾಗುತ್ತದೆ. 

ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘದ ಸಂಸ್ಥಾಪಕ ಬಿ.ಎಲ್.ಲಕ್ಕೇಗೌಡರು ತೀರಿಕೊಂಡ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ, ಬಂಧು ಬಳಗ ಹಾಗೂ ಅವರ ಅಭಿಮಾನಿಗಳಿಗೆ ದೇವರು ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

ಶ್ರೀಯುತರು ನಿವೃತ್ತ ಸರಕಾರಿ ಅಧಿಕಾರಿಯಾಗಿ, ವಕೀಲರಾಗಿ ಸೇವೆ ಸಲ್ಲಿಸಿ, ಭಾರತ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಭಾರತ್ ಕೋ ಆಪರೇಟೀವ್ ಬ್ಯಾಂಕ್ ಸ್ಥಾಪಿಸಿ, ನಾಡಪ್ರಭು ಕೆಂಪೇಗೌಡ ಕೇಂದ್ರ ಸಮಿತಿಯ ಅಧ್ಯಕ್ಷರಾಗಿ ದಶಕಗಳಿಂದ ಬೆಂಗಳೂರಿನಲ್ಲಿ ಅನೇಕ ಕನ್ನಡಪರ ಹೋರಾಟಗಳಲ್ಲಿ ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡವರು ಎಂದು ಅವರು ಸ್ಮರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News