ಮಡಿಕೇರಿ: ಸಂಘಪರಿವಾರದ ಕಾರ್ಯಕರ್ತ ಪ್ರವೀಣ್ ಪೂಜಾರಿ ಕೊಲೆ ಪ್ರಕರಣ: 9 ಮಂದಿ ಆರೋಪಿಗಳು ಖುಲಾಸೆ

Update: 2021-11-30 14:33 GMT

ಮಡಿಕೇರಿ ನ.30: ಕುಶಾಲನಗರ ಆಟೋ ಚಾಲಕ ಹಾಗೂ ಹಿಂದುತ್ವ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಪೂಜಾರಿ (34) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳು ಆರೋಪ ಮುಕ್ತರಾಗಿದ್ದಾರೆ.

ಮಡಿಕೇರಿ  ನ್ಯಾಯಾಲಯ ಈ ಬಗ್ಗೆ ಇಂದು ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆ 9 ಮಂದಿಯನ್ನು ಖುಲಾಸೆಗೊಳಿಸಲಾಗಿದೆ.

2016 ಆಗಸ್ಟ್ ತಿಂಗಳಿನಲ್ಲಿ ಹಿಂದೂ ಜಾಗರಣ ವೇದಿಕೆ ಕುಶಾಲನಗರದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಯಾತ್ರೆಯ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪ್ರವೀಣ್ ಪೂಜಾರಿ, ರಾತ್ರಿ ಮನೆಗೆ ಮರಳುತ್ತಿದ್ದಾಗ ಕೆಲವರು ಆಟೋವನ್ನು ಬಾಡಿಗೆಗೆ ಕರೆದಿದ್ದರು. ಗುಡ್ಡೆಹೊಸೂರು ಬಳಿಯ ತಿರುವಿನಲ್ಲಿ ಆಟೋದಲ್ಲಿದ್ದ ದುಷ್ಕರ್ಮಿಗಳು ಪ್ರವೀಣ್ ಪೂಜಾರಿಯನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು.

ತೀವ್ರ ರಕ್ತಸ್ರಾವವಾಗಿ ಪ್ರವೀಣ್ ಆಟೋದಲ್ಲೇ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿಯ ವಿರುದ್ಧ ದೂರು ದಾಖಲಾಗಿತ್ತು. ವಕೀಲ ಟಿ.ಹೆಚ್.ಅಬೂಬಕರ್ ಆರೋಪಿಗಳ ಪರ ವಾದ ಮಂಡಿಸಿದರು.

ತೀರ್ಪು ನೀಡುವ ವೇಳೆ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳ ಪ್ರಮುಖರು ಜಮಾಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News