ಚುನಾವಣೆ ನಡೆಸಲು ಲಂಚ: ಉಪನಿಬಂಧಕರ ಕಚೇರಿ ಅಧೀಕ್ಷಕ ಎಸಿಬಿ ಬಲೆಗೆ

Update: 2021-11-30 14:37 GMT

ಬೆಂಗಳೂರು, ನ.30: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆ ಪ್ರಕ್ರಿಯೆಗೆ ಅನುಮತಿಸಲು ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದ ಉಪನಿಬಂಧಕರ ಕಚೇರಿಯ ಅಧೀಕ್ಷಕ ಸೇರಿ ಇಬ್ಬರು ಎಸಿಬಿ ಬಲೆಗೆ ಬಿದಿದ್ದಾರೆ.

ಇಲ್ಲಿನ ವಾಜರಹಳ್ಳಿ ನಿವಾಸಿಯೊಬ್ಬರು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರಾಗಿದ್ದು, ಕಳೆದ ವರ್ಷ ಕೋವಿಡ್ ಕಾರಣದಿಂದ ಮೂಂದೂಡಲ್ಪಟ್ಟ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯ ಪ್ರಕ್ರಿಯೆ ನಡೆಸುವಂತೆ ಕೋರಿದ್ದಾರೆ.

ಆದರೆ, ಮಲ್ಲೇಶ್ವರಂನಲ್ಲಿನ 4ನೆ ವಲಯ ಉಪನಿಬಂಧಕರ ಕಚೇರಿಯ ಅಧೀಕ್ಷಕ ಸೋಮಶೇಖರಯ್ಯ, ಚುನಾವಣೆ ಪ್ರಕ್ರಿಯೆಗಾಗಿ 1 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು.

ಮಂಗಳವಾರ ಸೋಮಶೇಖರಯ್ಯ ಪರವಾಗಿ ಸಿಬ್ಬಂದಿ ಮೀನಾಕ್ಷಿ ಲಂಚದ ಹಣವನ್ನು ಪಡೆದುಕೊಳ್ಳುವಾಗ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದ ಎಸಿಬಿ ತನಿಖಾಧಿಕಾರಿಗಳು ಪ್ರಕರಣ ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News