50 ಹೊಸ ತಾಲೂಕುಗಳಿಗೆ ಮೂಲ ಸೌಕರ್ಯ ಕಲ್ಪಿಸದ ವಿಚಾರ: ಹೊಸ ಪ್ರಮಾಣಪತ್ರ ಸಲ್ಲಿಸಲು ಹೈಕೋರ್ಟ್ ಸೂಚನೆ

Update: 2021-11-30 15:15 GMT

ಬೆಂಗಳೂರು, ನ.30: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ 50 ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ, ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದೆ. 

ಈ ಕುರಿತು ಬೀದರ್ ಜಿಲ್ಲೆ ಔರಾದ್ ತಾಲೂಕಿನ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಹೊಸದಾಗಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ ನೀಡಿದೆ.

ರಾಜ್ಯ ಸರಕಾರ ಶೀಘ್ರ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲವಾದರೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕು ಎಂದು ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯದಲ್ಲಿ ಹೊಸ ತಾಲೂಕುಗಳನ್ನು ರಚಿಸಲು, ದಶಕಗಳಿಂದ ಇದ್ದ ಬೇಡಿಕೆ ಈಡೇರಿಸಲು ರಾಜ್ಯ ಸರಕಾರ 50 ಹೊಸ ತಾಲೂಕುಗಳನ್ನು ರಚನೆ ಮಾಡಿತ್ತು. 2018ರ ಜನವರಿಯಲ್ಲಿ ನೂತನ ತಾಲೂಕು ಕೇಂದ್ರಗಳಲ್ಲಿ ತಾಲೂಕು ಕಚೇರಿಗಳನ್ನು ತೆರೆದು ಕಾರ್ಯಾರಂಭ ಮಾಡಲು ಆದೇಶ ಹೊರಡಿಸಲಾಗಿತ್ತು. 
ಆದರೆ, ಎಲ್ಲ ಹೊಸ ತಾಲೂಕುಗಳಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ಅಧಿಕೃತವಾಗಿ ಆರಂಭವಾಗಿರಲಿಲ್ಲ. ಹೀಗಾಗಿ ಗುರುನಾಥ ವಡ್ಡೆ 2018ರಲ್ಲಿ ರಚನೆಯಾದ ತಾಲೂಕುಗಳಲ್ಲಿ ಸೌಕರ್ಯ ಕಲ್ಪಿಸಿಲ್ಲ. ತಾಲೂಕು ಕಚೇರಿಗಳನ್ನು ಸ್ಥಾಪಿಸಿಲ್ಲವೆಂದು ಪಿಐಎಲ್ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News