ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಖರ್ಗೆಗೆ ಮನಸ್ಸಿದೆ: ಎಚ್.ಡಿ ದೇವೇಗೌಡ

Update: 2021-11-30 15:32 GMT

ಹೊಸದಿಲ್ಲಿ, ನ.30: ವಿಧಾನ ಪರಿಷತ್ ಚುನಾವಣೆ ವಿಚಾರ ರಾಜ್ಯದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪ ತೀರ್ಮಾನ ಮಾಡುತ್ತಾರೆ. ಗೊಂದಲವಾಗದಂತೆ ನಿರ್ಧಾರ ಮಾಡಿ ಎಂದು ಹೇಳಿದ್ದೇನೆ. ಬಿಜೆಪಿಯವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ. ಮುಂದಿನ ಚುನಾವಣೆಗೆ ಇದೆ ಮೈತ್ರಿ ಮುಂದುವರೆಯುವ ಚರ್ಚೆ ನಡೆದಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಹೇಳಿದರು.

ಮಂಗಳವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಲ್ಲಿಕಾರ್ಜುನ ಖರ್ಗೆಯವರಿಗೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಮನಸ್ಸು ಇದೆ. ಆದರೆ, ಅದೇ ಮನಸ್ಸು ಬೇರೆ ನಾಯಕರಿಗೆ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರ ಮಾತು ಎಷ್ಟು ನಡೆಯುತ್ತೆ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಿದೆಯೋ ಗೊತ್ತಿಲ್ಲ. ನಾವು ಮೇಲೆ ಬಿದ್ದು ಮೈತ್ರಿ ಮಾಡಿಕೊಳ್ಳಿ ಎಂದು ಹೇಳಲು ಆಗಲ್ಲ. ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಬಗ್ಗೆ ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಡಿ.3 ಮತ್ತು 4ನೇ ತಾರೀಖಿನಂದು ತುಮಕೂರಿನಲ್ಲಿ ಪ್ರಚಾರ ಮಾಡುತ್ತೇನೆ. 5 ಮತ್ತು 6ನೇ ತಾರೀಖಿನಂದು ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ. ಬಿಬಿಎಂಪಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದೆವು. ಅವರು ಮೇಯರ್ ಆಗಿದ್ದರು, ನಾವು ಉಪಮೇಯರ್ ಆಗಿದ್ದೆವು ಅದೆಲ್ಲ ಮರೆತಿರಬಹುದು ಎಂದು ದೇವೇಗೌಡ ಹೇಳಿದರು.

ನನ್ನ ಜೀವನಾಧಾರಿತ ಪುಸ್ತಕ ಬಿಡುಗಡೆ ವಿಚಾರ. ಈಗಾಗಲೇ ಆನ್‍ಲೈನ್ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್‍ಗೆ 6 ಸಾವಿರ ಪುಸ್ತಕ ನೀಡಿದ್ದಾರೆ. ಪಬ್ಲಿಷರ್ ಪುಸ್ತಕ ಬಿಡುಗಡೆಗಾಗಿ ವ್ಯಕ್ತಿಯನ್ನ ಫೈನಲ್ ಮಾಡುತ್ತಿದ್ದಾರೆ. ಇನ್ನು ಯಾವತ್ತು ಪುಸ್ತಕ ಅಧಿಕೃತವಾಗಿ ಬಿಡುಗಡೆ ಅಂತ ದಿನಾಂಕ ನಿಗದಿಯಾಗಿಲ್ಲ ಎಂದು ದೇವೇಗೌಡ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News