ಇಸ್ರೋ ಯೋಜನೆ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ: ಡಿ.ಕೆ.ಶಿವಕುಮಾರ್

Update: 2021-11-30 16:07 GMT

ಬೆಂಗಳೂರು, ನ.30: ಇಸ್ರೋ ಅನ್ನು ಖಾಸಗಿಕರಣಗೊಳಿಸುವ ಯೋಜನೆ ನಡೆಸಲಾಗುತ್ತಿದೆ. ಮಾನವಸಹಿತ ಗಗನಯಾನ ಯೋಜನೆಯನ್ನು ಬೆಂಗಳೂರಿನಿಂದ ಗುಜರಾತಿಗೆ ಸ್ಥಳಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಇಸ್ರೋದಲ್ಲಿ ಮಾನವ ಸಂಪನ್ಮೂಲ ನೇಮಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಗಾರಿದರು.

ಮಂಗಳವಾರ ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಿರುವ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಿಗರು ಇದಕ್ಕೆ ಅವಕಾಶ ನೀಡುವುದಿಲ್ಲ. ಇಸ್ರೋ ನಮ್ಮ ಹೆಮ್ಮೆ. ಸ್ವಾತಂತ್ರ್ಯ ಬಂದ ನಂತರ ಇಸ್ರೋ, ಎಚ್‍ಎಎಲ್, ಎಚ್‍ಎಂಟಿ, ಬಿಎಚ್‍ಇಎಲ್ ಅನ್ನು ರಾಜ್ಯದಲ್ಲೇ ಆರಂಭಿಸಲಾಗಿತ್ತು. ರಾಜ್ಯ ಕೇವಲ ಮಾಹಿತಿ ತಂತ್ರಜ್ಞಾನ ಜಾಲ ಅಷ್ಟೇ ಅಲ್ಲ, ತಂತ್ರಜ್ಞಾನ ಕ್ಷೇತ್ರದ ಜಾಲವೂ ಆಗಿದೆ. 15 ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಇದ್ದಾರೆ. ಈ ವಿಚಾರವಾಗಿ ನಾವು ಸುಮ್ಮನೆ ಕೂರುವುದಿಲ್ಲ, ಪ್ರತಿಭಟನೆ ಮಾಡುತ್ತೇವೆ. ಈ ವಿಚಾರವಾಗಿ ಶಿವನ್ ಅವರು ಹೇಳಿಕೆ ನೀಡಿದ್ದು, ಅವರು ಸರಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಇಸ್ರೋ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಅವರು ಹೇಳಿದರು.

ಪರೀಕ್ಷೆ ಹೆಸರಲ್ಲಿ ಶೋಷಣೆ: ವಿಮಾನ ನಿಲ್ದಾಣ ಹಾಗೂ ಕರ್ನಾಟಕ ಗಡಿ ಭಾಗಗಳಲ್ಲಿ ಶೋಷಣೆ ಹೆಚ್ಚಾಗಿದೆ. ಸರಕಾರ 3 ಸಾವಿರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ. ಈ ವಿಚಾರದಲ್ಲಿ ದೊಡ್ಡ ಲಾಬಿ ನಡೆಯುತ್ತಿದೆ. ವಿದೇಶಕ್ಕೆ ಹೋಗಿ ಬಂದವರಿಗೆ ಉಚಿತ ಪರೀಕ್ಷೆ ನಡೆಸದೆ 3 ಸಾವಿರ ವಸೂಲಿ ಮಾಡುತ್ತಿರುವುದೇಕೆ? ಇದು ಸರಿಯಲ್ಲ. ಪರೀಕ್ಷೆಗೆ ಇಷ್ಟು ದುಬಾರಿ ಮೊತ್ತ ವಿಶ್ವದ ಇತರೆ ಯಾವುದೇ ರಾಷ್ಟ್ರಗಳಲ್ಲಿ ಪಡೆಯುತ್ತಿಲ್ಲ. ಜನ ಈಗಾಗಲೇ ಸಾಕಷ್ಟು ನೊಂದಿದ್ದು, ಅವರನ್ನು ಇನ್ನಷ್ಟು ಕಾಡುವುದು ಬೇಡ ಎಂದು ಶಿವಕುಮಾರ್ ತಿಳಿಸಿದರು. 

ಕೋವಿಡ್ ಆತಂಕದ ಸಮಯದಲ್ಲಿ ಮುಖ್ಯಮಂತ್ರಿ ಅಧಿಕಾರಿಗಳ ಸಭೆ ಮಾಡುವ ಬದಲು ಖಾಸಗಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 'ಅಕ್ಕಿ ಒಂದು ಕಡೆಯಿದೆ, ಅರಿಶಿನ ಒಂದುಕಡೆ ಇದೆ. ಎರಡು ಸೇರಿ ಮಂತ್ರಾಕ್ಷತೆ ಆಗುತ್ತದೆ. ಅವರು ಎಲ್ಲರಿಗೂ ಆಶೀರ್ವಾದ ಮಾಡುತ್ತಿದ್ದಾರೆ. ಮಾಡಲಿ ಬಿಡಿ' ಎಂದರು.

ಈಶ್ವರಪ್ಪ ಅವರ ಸಿಎಂ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ವಿಚಾರದಲ್ಲಿ ಚರ್ಚೆ ಬೇಡ. ಈಶ್ವರಪ್ಪ ಹಿರಿಯ ನಾಯಕರು, ಪಕ್ಷದ ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ ಆಗಿದ್ದವರು. ಪಕ್ಷದಲ್ಲಿ ವ್ಯಾಪಕವಾಗಿ ಆಗುವ ಚರ್ಚೆ ಬಗ್ಗೆ ಹೇಳಿದ್ದಾರೆ. ಮುಖ್ಯಮಂತ್ರಿ ಅವರನ್ನು ಸಂಪುಟದಿಂದ ಕೈ ಬಿಡಬೇಕು, ಇಲ್ಲವೇ ಅವರೇ ರಾಜೀನಾಮೆ ನೀಡಬೇಕು ಎಂದರು.

ಸರಕಾರದಲ್ಲಿರುವವರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಎಂದ ಮೇಲೆ, ಅವರ ನಾಯಕತ್ವದ ಮೇಲೆ ನಂಬಿಕೆ ಇಲ್ಲ ಎಂಬುದು ಸಾಬೀತಾದಂತಾಗಿದೆ. ಅಮಿತ್ ಶಾ ಅವರು ಬೊಮ್ಮಾಯಿ ಅವರ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂದು ಹೇಳುತ್ತಾರೆ. ಆದರೆ ಇವರು ನಿರಾಣಿ ಸಿಎಂ ಆಗುತ್ತಾರೆ ಎನ್ನುತ್ತಾರೆ. ಆ ಪಕ್ಷದಲ್ಲಿ ಯಾವುದೂ ಸರಿಯಿಲ್ಲ ಎಂದು ಇದರಿಂದ ಗೊತ್ತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಕೋವಿಡ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾವು ಕೇವಲ ಕೇರಳ ಗಡಿ ಭಾಗದಲ್ಲಿ ಮಾತ್ರ ಎಚ್ಚರಿಕೆ ವಹಿಸುತ್ತೇವೆ ಎಂದರೆ ಸಾಲದು. ಎಲ್ಲ ರೀತಿಯಲ್ಲೂ ನಾವು ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ, ರಾಷ್ಟ್ರಮಟ್ಟ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ನೀಡುವ ಮಾರ್ಗಸೂಚಿ ಅನುಸರಿಸೋಣ. ಯಾರನ್ನೂ ಅನಗತ್ಯವಾಗಿ ಗಾಬರಿಗೊಳಿಸುವುದು ಬೇಡ. ಸರಕಾರ ಮುಂಜಾಗ್ರತೆಯಾಗಿ ನೀಡಬೇಕಾದ ಮಾರ್ಗದರ್ಶನ ನೀಡಲಿ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದು ಅವರ ಪಕ್ಷ, ಅವರ ನಿರ್ಧಾರ. ಅದರ ಬಗ್ಗೆ ನಾವು ಮಾತನಾಡುವುದಿಲ್ಲ' ಎಂದರು.

ಸಿದ್ದರಾಮಯ್ಯ ಅವರನ್ನು ಕುಡುಕ ಎಂಬ ಸಚಿವ ಈಶ್ವರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 'ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಕೈಯಲ್ಲಿ ಹಿಡಿದಿರುವುದನ್ನು ಈಶ್ವರಪ್ಪನವರ ಕೈಗೆ ನೀಡಿ' ಎಂದು ಕುಟುಕಿದರು.

ಇಂದಿರಾ ಗಾಂಧಿ ದೇಶ ಕಂಡ ಅಚ್ಚುಮೆಚ್ಚಿನ ಪ್ರಧಾನಿ: ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿ ದೇಶ ಕಂಡ ಅಚ್ಚುಮೆಚ್ಚಿನ ಪ್ರಧಾನಿ. 75 ವರ್ಷಗಳಲ್ಲಿ ಅವರ ಸಾಧನೆ ಏನು ಎಂದು ಯುವ ಜನರಲ್ಲಿ ಅರಿವು ಮೂಡಿಸಲು ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ಇಂದಿರಾಗಾಂಧಿ ಅವರಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ರಾಜಕಾರಣದಲ್ಲಿ ಅವರು ಮರುಜೀವ ಪಡೆದಿದ್ದು ಇಲ್ಲಿಯೇ. ರಾಜೀವ್ ಗಾಂಧಿ ಅವರು ಯೂತ್ ಕಾಂಗ್ರೆಸ್ ಸಮ್ಮೇಳನವನ್ನು ಇಲ್ಲಿ ನಡೆಸಿ ರಾಜಕೀಯ ಜೀವನ ಆರಂಭಿಸಿದ್ದರು. ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಸ್ಪರ್ಧೆ ಮಾಡಿದ್ದರು. ಆಮೂಲಕ ಗಾಂಧಿ ಕುಟುಂಬಕ್ಕೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಅವರು ಹೇಳಿದರು.

ಇಂದಿರಾಗಾಂಧಿ ಅವರ ಈ ಛಾಯಾಚಿತ್ರ ಪ್ರದರ್ಶನವನ್ನು ಸಾರ್ವಜನಿಕರು ವೀಕ್ಷಿಸಿ ನಮ್ಮ ನಾಯಕರ ಕೊಡುಗೆ ಬಗ್ಗೆ ತಿಳಿಯಬೇಕು. ಒಂದು ವಾರ ಈ ಪ್ರದರ್ಶನ ನೋಡಬಹುದು. ಕಾಲೇಜು ವಿದ್ಯಾರ್ಥಿಗಳು ಇದರ ವೀಕ್ಷಣೆಗೆ ಬಹಳ ಆಸಕ್ತಿ ತೋರಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News