ಅಮೆರಿಕದ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಯಿಂದ ಶೂಟೌಟ್: ಮೂವರು ಮೃತ್ಯು

Update: 2021-12-01 02:35 GMT

ಮಿಚಿಗನ್: ಹದಿನೈದು ವರ್ಷದ ವಿದ್ಯಾರ್ಥಿಯೊಬ್ಬ ಮಿಚಿಗನ್ ಹೈಸ್ಕೂಲ್‌ನಲ್ಲಿ ಮಂಗಳವಾರ ನಡೆಸಿದ ಗುಂಡಿನ ದಾಳಿಯಲ್ಲಿ ಹದಿಹರೆಯದ ಮೂವರು ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ.

ಘಟನೆಯಲ್ಲಿ ಶಿಕ್ಷಕರು ಸೇರಿದಂತೆ ಎಂಟು ಮಂದಿಗೆ ಗಾಯಗಳಾಗಿವೆ. ಆ ಬಳಿಕ ವಿದ್ಯಾರ್ಥಿ ಪೊಲೀಸರಿಗೆ ಶರಣಾಗಿದ್ದಾನೆ. ಇದು ಈ ವರ್ಷ ಅಮೆರಿಕದ ಶಾಲೆಗಳಲ್ಲಿ ನಡೆದ ಭೀಕರ ದಾಳಿಯಾಗಿದೆ.

ಆಕ್ಸ್‌ಫರ್ಡ್ ಹೈಸ್ಕೂಲ್‌ನಲ್ಲಿ ಮಧ್ಯಾಹ್ನ ತರಗತಿಗಳು ನಡೆಯುತ್ತಿದ್ದಾಗ ನಡೆದ ಈ ದಾಳಿಯಲ್ಲಿ ಓರ್ವ ಶಿಕ್ಷಕ ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಓಕ್‌ಲ್ಯಾಂಡ್ ಕಂಟ್ರಿ ಶೆರೀಫ್ ಕಚೇರಿ ಹೇಳಿದೆ. ಮೃತಪಟ್ಟವರಲ್ಲಿ 16 ವರ್ಷದ ಬಾಲಕ, 14 ವರ್ಷದ ಬಾಲಕಿ ಮತ್ತು 17 ವರ್ಷದ ವಿದ್ಯಾರ್ಥಿನಿ ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಾಯಾಳುಗಳ ಪೈಕಿ ಆರು ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿದೆ. ಶಂಕಿತ ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತನಿಂದ ಅರೆ ಸ್ವಯಂಚಾಲಿತ ಹ್ಯಾಂಡ್‌ಗನ್ ವಶಪಡಿಸಿಕೊಳ್ಳಲಾಗಿದೆ. ಆದರೆ ವಿದ್ಯಾರ್ಥಿ ಏಕೆ ಈ ದಾಳಿಗೆ ಮುಂದಾದ ಎನ್ನುವುದು ಇನ್ನೂ ತಿಳಿದುಬಂದಿಲ್ಲ.

"ಇದು ತೀರಾ ದುಃಖದ ಸನ್ನಿವೇಶ" ಎಂದು ಅಧೀನ ಶೆರೀಫ್ ಮೈಕೆಲ್ ಮೆಕ್ಯೂಬ್ ಹೇಳಿದ್ದಾರೆ. "ಇದುವರೆಗೆ ಮೂವರು ಮೃತಪಟ್ಟಿದ್ದಾರೆ. ಇವರೆಲ್ಲರೂ ವಿದ್ಯಾರ್ಥಿಗಳು. ಹಲವು ಮಂದಿ ಪೋಷಕರು ಈ ಘಟನೆಯಿಂದ ಹತಾಶರಾಗಿದ್ದಾರೆ" ಮಧ್ಯಾಹ್ನದ ಬಳಿಕ 100 911ಕ್ಕೆ ತುರ್ತು ಕರೆ ಬಂದಿದ್ದು, ಐದು ನಿಮಿಷ ಅವಧಿಯಲ್ಲಿ ದಾಳಿಕೋರ ವಿದ್ಯಾರ್ಥಿ 15-20 ಗುಂಡು ಹಾರಿಸಿದ್ದಾನೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News