ವಿಧಾನಸೌಧದ ಆವರಣದಲ್ಲಿ ಇಮ್ಮಡಿ ಪುಲಿಕೇಶಿಯ ಮೂರ್ತಿ ಸ್ಥಾಪಿಸುವಂತೆ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಒತ್ತಾಯ

Update: 2021-12-01 12:07 GMT

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ ಮೂರ್ತಿಯನ್ನು ಸ್ಥಾಪಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಇಮ್ಮಡಿ ಪುಲಿಕೇಶಿಯ ಸಾಧನೆಯನ್ನು ವಿಸ್ತೃತವಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ಸೇರಿಸಬೇಕು ಎಂದೂ ಒತ್ತಾಯಿಸಿದ್ದಾರೆ. 

ಸಿದ್ದರಾಮಯ್ಯ ಅವರ ಟ್ವೀಟ್ ಇಂತಿವೆ

ಕರ್ನಾಟಕದ ಹೆಮ್ಮೆಯ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿಯ ಮೂರ್ತಿಯನ್ನು ಸ್ಥಾಪಿಸಬೇಕೆಂಬ ಆಂದೋಲನಕ್ಕೆ ನನ್ನ ಪೂರ್ಣ ಬೆಂಬಲ ಇದೆ. ಮೂರ್ತಿಯನ್ನು ವಿಧಾನಸೌಧದ ಆವರಣದಲ್ಲಿಯೇ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆಗ್ರಹಪಡಿಸುತ್ತೇನೆ.

ನಾಡದೊರೆ ಇಮ್ಮಡಿ ಪುಲಿಕೇಶಿಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಬೇಕು. ಕನ್ನಡದ ಅಸ್ಮಿತೆಯಾಗಿರುವ ಕನ್ನಡಿಗ ದೊರೆಯ ಸಾಧನೆಯನ್ನು ವಿಸ್ತೃತವಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ಕೂಡಾ ಸೇರಿಸಬೇಕು.

ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಮಹಾರಾಷ್ಟ್ರವೂ ಸೇರಿದಂತೆ ಕರ್ನಾಟಕವನ್ನು ಆಳಿದ ಇಮ್ಮಡಿ ಪುಲಿಕೇಶಿ ತನ್ನ ಚಿಂತನೆ ಮತ್ತು ಧೋರಣೆಗಳಲ್ಲಿ ಜನಪರ, ಜಾತ್ಯತೀತ ಮತ್ತು ಅಭಿವೃದ್ದಿಯ ಹರಿಕಾರನೂ ಆಗಿದ್ದ. ವಿಳಂಬವಾಗಿಯಾದರೂ ಅರ್ಹಗೌರವ ಸಲ್ಲಿಕೆಯಾಗಬೇಕು ಎಂದು ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News