ಬೆಳಗಾವಿ ಅಧಿವೇಶನ ರದ್ದುಪಡಿಸುವಂತೆ ಸಚಿವಾಲಯ ನೌಕರರ ಸಂಘದಿಂದ ಸ್ಪೀಕರ್ ಕಾಗೇರಿಗೆ ಮನವಿ

Update: 2021-12-01 12:28 GMT

ಬೆಂಗಳೂರು,ಡಿ.1:ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಧಾನ ಮಂಡಲ ಅಧಿವೇಶವನ್ನು ಕರೋನ ವೈರಸ್‌ನ ಹೊಸ ಪ್ರಭೇದ ಒಮೈಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರದ್ದುಪಡಿಸುವಂತೆ ಸಚಿವಾಲಯ ನೌಕರರ ಸಂಘ ಮನವಿ ಮಾಡಿದೆ.

ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರದ ಮೂಲಕ ಸಂಘ ಮನವಿ ಮಾಡಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ  ಡಿಸೆಂಬರ್ 13ರಿಂದ ವಿಧಾನ ಮಂಡಲದ ಅಧಿವೇಶವನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹವಾದರೂ ಕರೋನ ವೈರಸ್‌ನ ಹೊಸ ಪ್ರಭೇದ ಒಮೈಕ್ರಾನ್ ಹರಡುವ ಭೀತಿ ವಿಶ್ವದಾದ್ಯಂತ ಆವರಿಸುತ್ತಿದೆ. ವೈರಸ್ ಕಡಿವಾಣ ಹಾಕುವ ನಿಟ್ಟಿನಲ್ಲಿ ಇತ್ತೀಚಿಗೆ ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತಜ್ಞರು ಒಮೈಕ್ರಾನ್ ವೈರಸ್ ಸಂಬಂಧ ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಈ ಸಂಬಂಧ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಜಾರಿಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ.

ಪ್ರಸ್ತುತ ಬೆಳಗಾವಿಯು ಗಡಿ ಭಾಗದ ಜಿಲ್ಲೆಯಾಗಿದ್ದು , ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೊಂದಿಕೊಂಡಿವುದರಿಂದ ಅಂತರ್ ರಾಜ್ಯ ಹಾಗೂ ವಿದೇಶದಿಂದ ಆಗಮಿಸುವವರ ಸಂಚಾರ ಹೆಚ್ಚಾಗಿರುವ ಜಿಲ್ಲೆಯೂ ಆಗಿರುವುದರಿಂದ ಅಧಿವೇಶನದ ಕಾರಣದಿಂದ ಸಾವಿರಾರು ಜನ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳು , ರಾಜಕಾರಣಿಗಳು  ಒಂದೇ ಕಡೇ ಸೇರುವುದರಿಂದ ಒಮಿಕ್ರಾನ್  ವೈರಸ್ ಹರಡುವ ಭೀತಿ ಹೆಚ್ಚಾಗಿರುತ್ತದೆ. ಆದ್ದರಿಂದ, ಈ  ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13 ರಂದು ನಡೆಸಲು ಉದ್ದೇಶಿಸಿರುವ ವಿಧಾನ ಮಂಡಲ ಅಧಿವೇಶನವನ್ನು ರದ್ದುಗೊಳಿಸುವಂತೆ ಸಂಘದ ಅಧ್ಯಕ್ಷ ಗುರುಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News