ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

Update: 2021-12-01 13:03 GMT

ಬೆಂಗಳೂರು, ಡಿ.1: ಅಸ್ತಿತ್ವದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಗುರುತಿಸಿ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಈ ಸಂಬಂಧ ಕಸಾಯಿಖಾನೆಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಜಾನುವಾರುಗಳನ್ನು ರಕ್ಷಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಗೋ ಗ್ಯಾನ್ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅಕ್ರಮ ಪ್ರಾಣಿವಧೆ ತಡೆಗೆ ಕ್ರಮ ಕೈಗೊಳ್ಳಬೇಕು. ಕ್ರಮಕ್ಕೆ ಮುಂದಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳೇ ಹೊಣೆಗಾರರಾಗುತ್ತಾರೆ ಎಂದು ನ್ಯಾಯಪೀಠವು ಸರಕಾರಕ್ಕೆ ಸೂಚನೆ ನೀಡಿದೆ. 

ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಪೀಠವು ಸೂಚನೆ ನೀಡಿದೆ. ಚನ್ನರಾಯಪಟ್ಟಣದಲ್ಲಿ ಅಕ್ರಮವಾಗಿ ಗೋವಧೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿತ್ತು.

ಗೋವುಗಳ ಹತ್ಯೆಗೂ ಮುನ್ನ ಅವುಗಳ ವಯಸ್ಸು, ಅವುಗಳು ಹಾಲು ಕೊಡುತ್ತಿವೆಯೇ, ಕೃಷಿ ಚಟುವಟಿಕೆಗಳಿಗೆ ಯೋಗ್ಯವಾಗಿವೆಯೇ ಎಂಬ ಅಂಶಗಳನ್ನು ಪರಿಗಣಿಸಬೇಕು. ಅಂತಿಮವಾಗಿ ಗೋವುಗಳನ್ನು ಕಸಾಯಿ ಖಾನೆಗೆ ಕಳುಹಿಸುವ ಸಂಬಂಧ ಪಶು ವೈದ್ಯರಿಂದ ದೃಢೀಕರಿಸಿಕೊಳ್ಳಬೇಕು. ಆದರೆ, ಬಹುತೇಕ ಸಂದರ್ಭಗಳಲ್ಲಿ ಈ ಕಾನೂನನ್ನು ಪಾಲಿಸಲಾಗುತ್ತಿಲ್ಲ. ಕೇವಲ ಇದೊಂದು ಪ್ರಕರಣವಲ್ಲ. ಹುಬ್ಬಳ್ಳಿ, ಕಲಬುರಗಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಜಾನುವಾರುಗಳನ್ನು ಕಾನೂನುಬಾಹಿರವಾಗಿ ಹತ್ಯೆ ಮಾಡಲಾಗುತ್ತಿದೆ. ಹೀಗಾಗಿ, ಇಂತಹವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ನ್ಯಾಯಪೀಠವು ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News