ಐಎಂಎ ವಂಚನೆ ಪ್ರಕರಣ: ಅಗತ್ಯ ಕ್ರಮಕ್ಕೆ ಸೂಚಿಸಿ ಅರ್ಜಿಗಳನ್ನು ಇತ್ಯರ್ಥಪಡಿಸಿದ ಹೈಕೋರ್ಟ್

Update: 2021-12-01 13:47 GMT

ಬೆಂಗಳೂರು, ಡಿ.1: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, ಪ್ರಕರಣದ ಸಕ್ಷಮ ಪ್ರಾಧಿಕಾರವು ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದೊಂದಿಗೆ ಸಮನ್ವಯ ಸಾಧಿಸಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ನಿರ್ದೇಶಿಸಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಹಾಗೂ ಹೂಡಿಕೆದಾರರ ಹಣ ಹಿಂದಿರುಗಿಸಲು ಸರಕಾರ ಮತ್ತು ಐಎಎಂ ಸಂಸ್ಥೆಗೆ ನಿರ್ದೇಶಿಸುವಂತೆ ಕೋರಿ ಇಕ್ಬಾಲ್ ಅಹ್ಮದ್ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. 

ಈ ವೇಳೆ ಸಿಬಿಐ ಪರ ವಕೀಲರು ವಾದಿಸಿ, ಪ್ರಕರಣದ ಕುರಿತು ಈಗಾಗಲೇ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣವು ವಿಚಾರಣಾ ನ್ಯಾಯಾಲಯದ ಮುಂದಿದೆ ಎಂದರು. ಜಾರಿ ನಿರ್ದೇಶನಾಲಯದ ಪರ ವಕೀಲರು, ಪ್ರಕರಣ ಸಂಬಂಧ ಈಡಿ ಸಹ ಪ್ರಾಸಿಕ್ಯೂಷನ್ ಕ್ರಮ ಜರುಗಿಸುತ್ತಿದೆ ಎಂದು ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಸಂಸ್ಥೆಯ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಇನ್ನೂ ಸಾಕಷ್ಟು ಕ್ರಮ ಕೈಗೊಳ್ಳಬೇಕಿದೆ ಎಂದು ಅರ್ಜಿದಾರರ ಪರ ವಕೀಲರು ವಿವರಿಸಿದರು. 

ವಾದ ಆಲಿಸಿದ ಪೀಠ, ಪ್ರಕರಣದ ಸೂಕ್ತ ತನಿಖೆಗೆ ಕೋರಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸಿಬಿಐ ಈಗಾಗಲೇ ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಿದೆ.

ಹೀಗಾಗಿ, ಅರ್ಜಿಯ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ಸಕ್ಷಮ ಪ್ರಾಧಿಕಾರವು ತನಿಖಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕರಣ ಸಂಬಂಧ ಅಗತ್ಯವಿರುವ ಮುಂದಿನ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಸೂಚಿಸಿ, ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News