ವಿಧಾನ ಪರಿಷತ್ ಚುನಾವಣೆ ಬಳಿಕ ಡಿಕೆಶಿ ಜೊತೆ ಯಾವುದೇ ರೀತಿಯ ಚರ್ಚೆಗೆ ನಾನು ಸಿದ್ಧ: ರಮೇಶ್ ಜಾರಕಿಹೊಳಿ

Update: 2021-12-01 14:01 GMT

ಬೆಳಗಾವಿ, ಡಿ. 1: ‘ತನ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಏನೇನೋ ಮಾತನಾಡಿದ್ದಾರೆ. ಆದರೆ, ಅವರ ಎಲ್ಲ ಪ್ರಶ್ನೆಗಳಿಗೆ ನಾನು ಈಗ ಉತ್ತರ ನೀಡುವುದಿಲ್ಲ. ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಎಲ್ಲ ವಿವರ ನೀಡುತ್ತೇನೆ ಎಂದು ಮಾಜಿ ಸಚಿವ, ಗೋಕಾಕ್ ಕ್ಷೇತ್ರದ ಹಾಲಿ ಶಾಸಕ ರಮೇಶ ಜಾರಕಿಹೊಳಿ ಎಚ್ಚರಿಸಿದರು.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,1985ರಿಂದ ಹಿಡಿದು ಇಲ್ಲಿಯವರೆಗೆ ನಾನು ಮತ್ತು ನಮ್ಮ ಕುಟುಂಬ ಹಾಗೂ ಡಿ.ಕೆ. ಶಿವಕುಮಾರ್ ಮತ್ತವರ ಕುಟುಂಬ ಹೇಗಿತ್ತು ಎಂಬುದರ ಬಗ್ಗೆ ವಿವರ ಕೊಡುತ್ತೇನೆ' ಎಂದು ತಿಳಿಸಿದರು.

‘ವಿಧಾನ ಪರಿಷತ್ ಚುನಾವಣೆ ಪ್ರಚಾರ ನಡೆಯುತ್ತಿದೆ. ಈ ಸಂದರ್ಭದಲ್ಲಿ ನನ್ನ ಮತ್ತು ಶಿವಕುಮಾರ್ ಮಧ್ಯೆ ವಾಗ್ವಾದ ಸರಿಯಲ್ಲ. ಚುನಾವಣೆ ಬಳಿಕ ಇಬ್ಬರ ನಡುವೆ ಯಾವುದೇ ರೀತಿಯ ಚರ್ಚೆಯೂ ಆಗಲಿ. ಒಂದು ವೇಳೆ ವಾರ್ ಕೂಡ ಆಗಲಿ. ಎಲ್ಲಕ್ಕೂ ನಾನು ಸಿದ್ಧ' ಎಂದು ರಮೇಶ್ ಜಾರಕಿಹೊಳಿ ಇದೇ ಸಂದರ್ಭದಲ್ಲಿ ತಿಳಿಸಿದರು.

‘ನನಗೆ ಬಿಜೆಪಿ ಹೈಕಮಾಂಡ್ ಆಶೀರ್ವಾದ ಮತ್ತು ಬೆಂಬಲ ಇರುವುದರಿಂದಲೇ ನಾನು ಇಲ್ಲಿ ಇದ್ದೇನೆ. ಇಲ್ಲದಿದ್ದರೆ ನನ್ನನ್ನು ಇಷ್ಟೊತ್ತಿಗೆ ಮುಗಿಸಿ ಬಿಡುತ್ತಿದ್ದರು' ಎಂದರು.

‘ನನಗೆ ಬಿಜೆಪಿ ಮತ್ತು ಆರೆಸೆಸ್ಸ್ ನಾಯಕರ ಆಶೀರ್ವಾದವೂ ಇದೆ. ಹೀಗಾಗಿ ನಾನು ಧೈರ್ಯವಾಗಿ ಇದ್ದೇನೆ. ಇಲ್ಲದಿದ್ದರೆ ಷಡ್ಯಂತ್ರ ಮಾಡಿ ನನ್ನನ್ನು ಮುಗಿಸಿ ಬಿಡುತ್ತಿದ್ದರು’ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News