‘ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ:ಸುದ್ದಿಗೋಷ್ಠಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ

Update: 2021-12-01 15:36 GMT

ಬೆಂಗಳೂರು, ಡಿ.1: ವಿಧಾನಪರಿಷತ್ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯೂಸುಫ್ ಶರೀಫ್ ಯಾನೆ ಕೆಜಿಎಫ್ ಬಾಬು ತಮ್ಮ ಸ್ವಂತ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಈ ಸಂಬಂಧ ಅವರ ಮಗಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪಕ್ಕೆ, ಕೆಜಿಎಫ್ ಬಾಬು ಅವರ ಕುಟುಂಬ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಣ್ಣೀರು ಹಾಕಿದ ಕೆಜಿಎಫ್ ಬಾಬು: ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾಡಿರುವ ಆರೋಪದ ಕುರಿತು ಪ್ರತ್ಯುತ್ತರ ನೀಡಲು ಕುಟುಂಬ ಸದಸ್ಯರೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೆಜಿಎಫ್ ಬಾಬು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದರು. ರಾಜಕೀಯದಲ್ಲಿ ಈ ರೀತಿಯ ವಾತಾವರಣ ಇದೆ ಎಂದು ಗೊತ್ತಿದ್ದರೆ ದೇವರಾಣೆಗೂ ಖಂಡಿತವಾಗಿಯೂ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ. 10 ತಲೆಮಾರು ತಿನ್ನುವಷ್ಟು ಆಸ್ತಿ ಆ ದೇವರು ನನಗೆ ನೀಡಿದ್ದಾನೆ. ಆದರೆ, ನಾನು ಇಲ್ಲಿ ಬಂದು ತಪ್ಪು ಮಾಡಿಬಿಟ್ಟೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕಣ್ಣೀರು ಹಾಕುತ್ತಲೆ ಎದ್ದು ಹೊರನಡೆದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ನನಗೆ ನನ್ನ ಪತ್ನಿ ಮತ್ತು ಮಗಳು ಎಂದರೆ ಪ್ರಾಣ. ಬಿಲ್ಡರ್ ನವೀದ್ 300 ಕೋಟಿ ರೂ.ಮೌಲ್ಯದ ಆಸ್ತಿ ಖರೀದಿ ಮಾಡಿದ್ದ. ನನಗೆ 6 ಲಕ್ಷ ರೂ.ಗಳನ್ನು ಮಾತ್ರ ಕೊಟ್ಟು ಉಳಿದ ಹಣವನ್ನು ನೀಡದೆ ವಂಚಿಸಿದ. ಈ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆತನೆ ನನ್ನ ಮೊದಲ ಹೆಂಡತಿಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಆಕೆಯನ್ನು ನನ್ನ ವಿರುದ್ಧ ದೂರು ನೀಡುವಂತೆ ಚಿತಾವಣೆ ನಡೆಸಿದ. ಅಲ್ಲದೆ, ನನ್ನ ಹೆಂಡತಿ ಹಾಗೂ ಮಗಳನ್ನು ಅಪಹರಿಸಿದ್ದ ಎಂದು ದೂರಿದರು.

ಬೆಂಗಳೂರು, ಮೈಸೂರು, ತಮಿಳುನಾಡಿನಲ್ಲಿ ಸುಮಾರು ಆರು ತಿಂಗಳು ಕಾಲ ನನ್ನ ಹೆಂಡತಿ ಹಾಗೂ ಮಗಳನ್ನು ಬಚ್ಚಿಟ್ಟಿದ್ದ. ನನ್ನ ಮೇಲೆ ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ಹಾಕಿಸಿದ್ದ. ಅಲ್ಲದೆ, ನನ್ನಿಂದ ಒಂದು ಸಾವಿರ ಕೋಟಿ ರೂ.ಪರಿಹಾರ ಕೇಳುವಂತೆ ನನ್ನ ಹೆಂಡತಿಯನ್ನು ಪುಸಲಾಯಿಸಿದ್ದ. ಬಳಿಕ ನನ್ನ ಹೆಂಡತಿ ಆ ಪ್ರಕರಣವನ್ನು ಹಿಂಪಡೆದರು. ಆದರೆ, ಸಚಿವರು ಮಾಡಿರುವ ಆರೋಪದಂತೆ ನಾನು ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿಲ್ಲ ಎಂದು ಅವರು ಕಣ್ಣೀರು ಹಾಕಿದರು.

ಕೆಜಿಎಫ್ ಬಾಬು ಅವರ ಮೊದಲ ಪತ್ನಿ ರುಕ್ಸಾನಾ ತಾಜ್ ಮಾತನಾಡಿ, ಯಾರ ಮನೆಯಲ್ಲಿ ಜಗಳ ಆಗುವುದಿಲ್ಲ. ರಾಜಕೀಯಕ್ಕಾಗಿ ನಮ್ಮ ಕುಟುಂಬದ ವಿಚಾರವನ್ನು ಬೀದಿಗೆ ತಂದು ಚರ್ಚೆ ಮಾಡುತ್ತಿರುವುದು ನೋಡಿ ತುಂಬಾ ದುಃಖ ಆಗಿದೆ. ನನ್ನ ಪತಿ ಸಮಾಜ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದಾರೆ. 10 ವರ್ಷಗಳ ಹಿಂದೆ ನಮ್ಮ ಕುಟುಂಬದಲ್ಲಿ ನಡೆದ ಒಂದು ವಿಚಾರವನ್ನು ಈಗ ಚರ್ಚೆ ಮಾಡಲಾಗುತ್ತಿದೆ ಎಂದು ಕಣ್ಣೀರು ಹಾಕಿದರು.

ನನ್ನ ಪತಿ ನನಗೆ ಗೊತ್ತಿಲ್ಲದೆ ಎರಡನೆ ವಿವಾಹವಾಗಿದ್ದರು. ಈಗ ನಾವೆಲ್ಲ ಜೊತೆಯಲ್ಲಿ ಸಂತೋಷದಿಂದಲೆ ಇದ್ದೇವೆ. ಕುಟುಂಬದ ಎಲ್ಲ ಆಸ್ತಿ ನನ್ನ ಹೆಸರಿನಲ್ಲೆ ಇದೆ. ರಾಜಕೀಯಕ್ಕಾಗಿ ನಮ್ಮ ಮನೆಯನ್ನು ಹಾಗೂ ನಮ್ಮ ಮಗಳ ಸಂಸಾರ ಹಾಳು ಮಾಡಬೇಡಿ ಎಂದು ಅವರು ಕೈ ಮುಗಿದು ಮನವಿ ಮಾಡಿದರು.

ಕೆಜಿಎಫ್ ಬಾಬು ಅವರ ಮಗಳು ಕುಬ್ರಾ ಮಾತನಾಡಿ, ನನ್ನ ತಂದೆ ವಿರುದ್ಧ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತವಾದದ್ದು, ನನ್ನ ತಂದೆ, ತಾಯಿಯನ್ನು ಒಂದುಗೂಡಿಸಲು ಎಂದು ಹೇಳಿ ಜೇಸನ್ ನವೀದ್ ಬಲವಂತದಿಂದ ನನ್ನ ಸಹಿ ಪಡೆದಿದ್ದರು. ಈ ವಿಚಾರವನ್ನು ನಾನು ನ್ಯಾಯಾಲಯದಲ್ಲಿಯೂ ಹೇಳಿದ್ದೇನೆ. ಆಗ ನನಗೆ ಕೇವಲ 10 ವರ್ಷ ವಯಸ್ಸು. ಈಗ ಸಚಿವರು ಮಾಡಿರುವ ಆರೋಪದಂತಹ ಯಾವ ಘಟನೆಯು ನಡೆದಿಲ್ಲ ಎಂದರು.

ಕೆಜಿಎಫ್ ಬಾಬು ಅವರ ಎರಡನೆ ಹೆಂಡತಿ ಶಾಝಿಯಾ ಮಾತನಾಡಿ, ಬಿಲ್ಡರ್ ಜೇಸನ್ ನವೀದ್ ನಮ್ಮ ಕುಟುಂಬದ ಸ್ನೇಹಿತರಾಗಿದ್ದರು. ನನ್ನ ಪತಿ ನನ್ನನ್ನು ಎರಡನೆ ಮದುವೆಯಾದ ವಿಚಾರವನ್ನು ಆತನೆ ಕುಟುಂಬಕ್ಕೆ ತಿಳಿಸಿದ್ದು. ಸಚಿವರೆ ನಿಮ್ಮ ಮನೆಯಲ್ಲಿ ಜಗಳ ಆಗುವುದಿಲ್ಲವೇ? ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲವೇ? ನನ್ನ ಪತಿ ಒಬ್ಬ ಉತ್ತಮ ವ್ಯಕ್ತಿ, ಉತ್ತಮ ತಂದೆ. ಮನೆಯ ವಿಚಾರವನ್ನೆಲ್ಲ ನಿಮ್ಮ ರಾಜಕೀಯಕ್ಕಾಗಿ ಯಾಕೆ ಬಳಸಿಕೊಳ್ಳುತ್ತಿದ್ದೀರಾ? ಎಂದು ಪ್ರಶ್ನಿಸಿದರು.

ರಾಜಕೀಯ ಮಾಡೋದಾದರೆ ಮಾಡಿ, ಕೋಟ್ಯಂತರ ರೂ.ಗಳನ್ನು ಜನರ ಸೇವೆಗೆ ನನ್ನ ಪತಿ ಖರ್ಚು ಮಾಡುತ್ತಿದ್ದಾರೆ. ಜನರ ಸೇವೆ ಮಾಡುವ ಉದ್ದೇಶದಿಂದಲೆ ಅವರು ರಾಜಕೀಯಕ್ಕೆ ಬಂದಿದ್ದಾರೆ. ನಾನು ಹಾಗೂ ನನ್ನ ಅಕ್ಕ(ಮೊದಲ ಪತ್ನಿ) ಒಟ್ಟಾಗಿ, ಒಂದೆ ಮನೆಯಲ್ಲಿ ವಾಸವಿದ್ದೇವೆ. ನಿಮ್ಮ ಕ್ಷುಲ್ಲಕ ರಾಜಕೀಯಕ್ಕೆ ನಮ್ಮ ಮನೆ, ಮಗಳ ಭವಿಷ್ಯ ಹಾಳು ಮಾಡಬೇಡಿ ಎಂದು ಅವರು ಹೇಳಿದರು.

ನಮ್ಮ ಬಳಿಯಿರುವ ಹಣವನ್ನು ಜನರ ಸೇವೆಗೆ ಬಳಸಲು ಮುಂದಾಗಿದ್ದೇವೆ. ಇದಕ್ಕಾಗಿ ನಮ್ಮ ಕುಟುಂಬದ ಎಲ್ಲ ಸದಸ್ಯರ ಬೆಂಬಲ ಇದೆ. ಇವೆಲ್ಲ ಜೇಸನ್ ನವೀದ್ ಮಾಡುತ್ತಿರುವ ಕುತಂತ್ರ. ಕೋಲಾರದಲ್ಲಿ ನಾವು ಸಮಾಜ ಸೇವೆ ಆರಂಭಿಸುತ್ತಿದ್ದಂತೆ ಅವರು ಬ್ಲಾಕ್‍ಮೇಲ್ ಮಾಡಲು ಆರಂಭಿಸಿದ್ದಾರೆ. ನಾವು ಏನು ತಪ್ಪು ಮಾಡಿಲ್ಲ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. 10 ವರ್ಷಗಳ ಹಿಂದಿನ ಘಟನೆಯನ್ನು ಈಗ ತಂದು ಬೀದಿಗೆ ಎಳೆಯುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿದ್ದರೆ ನಾವು ಇಬ್ಬರು ಹೆಂಡತಿಯರು ನಮ್ಮ ಗಂಡನ ಕಾಲು ಹಿಡಿದು ರಾಜಕೀಯಕ್ಕೆ ಬರದಂತೆ ತಡೆಯುತ್ತಿದ್ದೆವು ಎಂದು ಶಾಝಿಯಾ ಹೇಳಿದರು.

ನಿವೃತ್ತ ಡಿಸಿಪಿ ಜಿ.ಎ.ಬಾಬಾ ಮಾತನಾಡಿ, ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪದಿಂದ ಖಿನ್ನತೆಗೆ ಒಳಗಾಗಿರುವ ರುಕ್ಸಾನಾ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ನಾವೆಲ್ಲ ಅವರನ್ನು ಸಮಾಧಾನಪಡಿಸಿದ್ದೇವೆ. ಕುಟುಂಬದ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದು ಬಿಜೆಪಿ ಯಾವ ರೀತಿಯ ರಾಜಕೀಯ ಮಾಡುತ್ತಿದೆ ಅನ್ನೋದನ್ನು ಅವರೇ ಅರ್ಥ ಮಾಡಿಕೊಳ್ಳಲಿ ಎಂದರು.

ಸಚಿವ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ

ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕ ನಂತರ, ನಾವು ಬೆಂಗಳೂರಿನಲ್ಲಿ ಸಮಾಜ ಸೇವೆಗೆ 100 ಕೋಟಿ ರೂ.ಗಳನ್ನು ಬಳಸುತ್ತೇವೆ ಎಂದು ಹೇಳಿಕೆ ನೀಡಿದ್ದೇವೆ. ನಮ್ಮ ಆಸ್ತಿ, ದಾಖಲೆಗಳ ಬಗ್ಗೆ ಜೇಸನ್ ನವೀದ್‍ಗೆ ಗೊತ್ತಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‍ಗೆ ಈ ಎಲ್ಲ ಮಾಹಿತಿಯನ್ನು ಆತನೆ ನೀಡಿರುವುದು. ನಮ್ಮ ಕುಟುಂಬದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿರುವ ಸೋಮಶೇಖರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿದ್ದೇವೆ.
-ಶಾಝಿಯಾ, ಕೆಜಿಎಫ್ ಬಾಬು ಅವರ ಎರಡನೆ ಹೆಂಡತಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News