ಸಿದ್ದರಾಮಯ್ಯ, ಜಿ.ಟಿ.ದೇವೇಗೌಡ ಒಂದಾದರೆ ನಮಗೇಕೆ ಭಯ: ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನೆ

Update: 2021-12-01 16:05 GMT

ಮೈಸೂರು,ಡಿ.1: ಜಿ.ಟಿ.ದೇವಗೌಡರೆ ನೀವು ಕಾಂಗ್ರೆಸ್ ಪಕ್ಷವನ್ನು ಸೇರಿ ಅವಕಾಶ ರಾಜಕಾರಣಿ ಎಂಬ ಟೀಕೆಗೆ ಗುರಿಯಾಗ ಬೇಡಿ ಎಂದು ಶಾಸಕ ಜಿ.ಟಿ.ದೇವೇಗೌಡರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಸಿದ್ದರಾಮಯ್ಯ ಬಾದಾಮಿಯಲ್ಲೂ ಸೋಲುತ್ತಾರೆ. ಹೇಗಾದರೂ ಮಾಡಿ ನನ್ನ ಉಳಿಸಪ್ಪ ಎಂದು ಜಿ.ಟಿ.ದೇವೇಗೌಡರ ಬಳಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಗತಿ ಇಲ್ಲ ಹಾಗಾಗಿ ರಾಜಕೀಯ ಸ್ಥಿರತೆ ಉಳಿಸಿಕೊಳ್ಳಲು ಜಿ.ಟಿ.ದೇವೇಗೌಡರ ಸ್ನೇಹ ಬೆಳಸುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಿ.ಟಿ.ದೇವೇಗೌಡ ಒಂದಾದರೆ ನಮಗೆ ಭಯ ಏಕೆ? ನಾವು ರಾಹುಲ್ ಗಾಂಧಿಯನ್ನೇ ಸೋಲಿಸಿದ್ದೇವೆ. ಇನ್ನು ಇವರು ಯಾವ ಲೆಕ್ಕ ಎಂದು ಹೇಳಿದರು.

ನಮ್ಮ ಹಿಂದುಳಿದ ಮತ್ತು ಒಬಿಸಿ ಜನರು ಕಾಂಗ್ರೆಸ್ ನವರಿಗೆ ಮತ ನೀಡಿ ಅವರನ್ನು ಗೆಲ್ಲಿಸಿ 70 ವರ್ಷ ಆಡಳಿತ ಮಾಡಲು ಅವಕಾಶ ಕೊಟ್ಟಿದ್ದೀರಿ, ಆದರೆ ಅವರು ಏನು ಮಾಡಲಿಲ್ಲ ಅಂತ ಅವರನ್ನು ಹಿಂದೆ ಸರಿಸಿದ್ದಾರೆ. ಈಗ ನಮ್ಮ ಪಕ್ಷವನ್ನು ನಂಬಿ ಬರುತ್ತಿದ್ದಾರೆ ಆದ್ದರಿಂದ ನಾವು ನಮ್ಮ ಪಕ್ಷದಿಂದ ಹಿಂದುಳಿದವರಿಗೆ ಮತ್ತು ಒಬಿಸಿ ಜನರಿಗೆ ಏನು ಬೇಕೋ ಅದನ್ನು ಮಾಡಲು ಸಿದ್ಧರಿದ್ದೇವೆ. ಅವರ ಏಳಿಗೆಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ನಿನ್ನೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಗಳನ್ನು ಭೇಟಿ ಮಾಡಿರುವುದರ ಕುರಿತು ಪ್ರತಿಕ್ರಿಯಿಸಿ ಎಲ್ಲ ಪಕ್ಷಗಳು ಇರುವುದು ದೇಶದ ಒಳಿತಿಗಾಗಿ , ಯಾವುದೇ ರೀತಿಯ ಕಚ್ಚಾಡುವುದಕ್ಕಲ್ಲ , ದೇವೇಗೌಡರ ಮತ್ತು ಪ್ರಧಾನಿಗಳ ಭೇಟಿ ಇದಕ್ಕೆ ಒಂದು ನಿದರ್ಶನವಾಗಿದೆ ಎಂದು ಹೇಳಿದರು.

ಜಿ.ಟಿ ದೇವೆಗೌಡ ಮತ್ತು ಸಿದ್ದರಾಮಯ್ಯ ನವರು ಒಂದಾಗಿರುವುದರ ಕುರಿತು ಪ್ರತಿಕ್ರಿಯಿಸಿ ಮೊದಲೆಲ್ಲ ಜಿ.ಟಿ.ದೇವೇಗೌಡ ಸಿದ್ದರಾಮಯ್ಯನವರನ್ನು ಸೋಲಿಸಲು ನಮಗೆ ಸಹಾಯ ಮಾಡುತ್ತಿದ್ದರು. ಆದರೆ ಈಗ ಅವಕಾಶಕ್ಕಾಗಿ ಕಾಂಗ್ರೆಸ್ ಅನ್ನು ಸೇರಿಕೊಳ್ಳುತ್ತಿದ್ದಾರೆ . ನೀವು ಅವಕಾಶವಾದಿ ರಾಜಕಾರಣಿ ಎಂಬ ಟೀಕೆಗೆ ಗುರಿಯಾಗ ಬೇಡಿ ಎಂದು ಜಿ.ಟಿ ದೇವೇಗೌಡರಿಗೆ ಸಲಹೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News