'ನಮ್ಮದು ಶ್ರೀರಾಮಚಂದ್ರನ ಮೊಮ್ಮಕ್ಕಳ ಪಕ್ಷ ಎಂದು ಹೇಳಲು ಬಿಜೆಪಿಯವರಿಗೆ ನಾಚಿಕೆ ಆಗಲ್ವಾ' :ಧ್ರುವನಾರಾಯಣ್ ಪ್ರಶ್ನೆ

Update: 2021-12-01 17:08 GMT

ಚಿಕ್ಕಮಗಳೂರು, ಡಿ.1: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಕೆ.ಎಸ್.ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಯಡಿಯೂರಪ್ಪನವರ ಮಗ ವಿಜಯೇಂದ್ರನ ಭ್ರಷ್ಟಚಾರದ ಬಗ್ಗೆ ಅವರ ಪಕ್ಷದ ಕೆಲ ಮುಖಂಡರೇ ಆರೋಪ ಮಾಡಿದ್ದರು. ಈ ಹಿನ್ನೆಲೆ ಹೊಂದಿರುವ ಬಿಜೆಪಿಯವರಿಗೆ ನಮ್ಮದು ಶಿಸ್ತಿನ ಪಕ್ಷ, ನಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೇ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಪ್ರಶ್ನಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಆಂತರಿಕ ಸಮಸ್ಯೆ ಇಟ್ಟುಕೊಂಡು ನಮ್ಮ ಪಕ್ಷದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಮೊದಲು ರಾಜ್ಯದಲ್ಲಿ ಅಧಿಕಾರ ಹಿಡಿದಾಗ ಮೂರು ಮುಖ್ಯಮಂತ್ರಿಗಳು ಬದಲಾಗಿದ್ದರು. ಬಿಜೆಪಿ ಪಕ್ಷ ಮೂರು ಪಕ್ಷಗಳಾಗಿ ವಿಭಜನೆ ಆಗಿತ್ತು. ಎರಡನೇ ಭಾರಿ ಅಧಿಕಾರ ಸಿಕ್ಕಿದ್ದರೂ ಜನಪರ ಕಾರ್ಯಕ್ರಮಗಳನ್ನು ನೀಡದ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ,

 ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಬದಲಾವಣೆ ಆಗುತ್ತಾರೆ ಎಂಬ ಮುನ್ಸೂಚನೆಯನ್ನು ಈಶ್ವರಪ್ಪ ಈಗಾಗಲೇ ನೀಡಿದ್ದಾರೆ. ಇದು ಈಶ್ವರಪ್ಪನವರ ಬಾಯಿಂದ ಬಂದ ಮಾತಲ್ಲ, ಆ ಪಕ್ಷದ ವರಿಷ್ಠರಿಂದ ಬರುವ ಮಾತಾಗಿದೆ. ನಳಿನ್‍ಕುಮಾರ್ ಕಟೀಲ್, ಈಶ್ವರಪ್ಪ, ಸಿ.ಟಿ.ರವಿ ತಮ್ಮ ವರಿಷ್ಠರಿಂದ ಬಂದ ಮಾತನ್ನೇ ಹೇಳುತ್ತಾರೆ. ಹಾಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಮತ್ತೊಮ್ಮೆ ಸಿಎಂ ಬದಲಾವಣೆ ಆಗುವುದು ನಿಶ್ಚಿತ ಎಂದರು.

ಈಶ್ವರಪ್ಪ ಬಾಯಲ್ಲಿ ಬರುವ ಮಾತು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ದಿನಕ್ಕೊಂದು ಮಾತನಾಡುತ್ತಾರೆಯೇ ಹೊರತು, ಗ್ರಾಮೀಣಾಭಿವೃದ್ಧಿ ಬಗ್ಗೆ ಒತ್ತು ನೀಡುವ ಕುರಿತು ಮಾತನಾಡುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ತೇಜೋವಧೆ ಮಾಡುವ ಮಾತನಾಡುತ್ತಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆ ಇದ್ದರೇ, ಧೈರ್ಯ ಇದ್ದರೇ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಕೂಡಲೇ ಮಾಡಲಿ ಎಂದು ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News