ಕಾರಾಗೃಹಗಳಿಗೆ ಇಂಟರ್‌ನೆಟ್: ಮಾಹಿತಿ ಕೇಳಿದ ಹೈಕೋರ್ಟ್

Update: 2021-12-01 17:29 GMT

ಬೆಂಗಳೂರು, ಡಿ.1: ರಾಜ್ಯದ ಎಷ್ಟು ಕಾರಾಗೃಹಗಳಲ್ಲಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ ಮತ್ತು ಎಷ್ಟು ಜೈಲುಗಳಲ್ಲಿ ಹೊಸದಾಗಿ ಸಂಪರ್ಕ ಕಲ್ಪಿಸಬೇಕಿದೆ ಎಂಬ ಕುರಿತು ಮಾಹಿತಿ ಒದಗಿಸಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ. 

ಕಾರಾಗೃಹಗಳಲ್ಲಿನ ಸ್ಥಿತಿಗತಿ ಕುರಿತಂತೆ ಸಲ್ಲಿಸಿದ್ದ ಪಿಐಎಲ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್, ಬೆಂಗಳೂರು, ಮೈಸೂರು ಸೇರಿ ಪ್ರಮುಖ ನಗರಗಳ ಕಾರಾಗೃಗಳಿಗೆ ಹೋಲಿಸಿದರೆ ಇತರೆಡೆಗಳಲ್ಲಿ ಕಾರಾಗೃಹಗಳಿಗೆ ಇಂಟರ್‌ನೆಟ್ ಸಂಪರ್ಕವಿಲ್ಲ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಶಿಕ್ಷೆಗೊಳಗಾಗಿರುವ ಬಹಳಷ್ಟು ಕೈದಿಗಳು ಜೈಲಿನಲ್ಲೇ ಕೊಳೆಯುತ್ತಿರುತ್ತಾರೆ, ಅವರಿಗೆ ಯಾರ ನೆರವೂ ಸಿಗುವುದಿಲ್ಲ. ಅಂತಹವರಿಗೆ ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರಗಳ ಮೂಲಕ ನೆರವು ನೀಡಬಹುದು. ಈಗಾಗಲೇ ಬಹಳಷ್ಟು ರಾಜ್ಯಗಳಲ್ಲಿ ಕಾರಾಗೃಹಗಳಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿ ಆ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜೈಲುಗಳಿಗೆ ವಿಡಿಯೊ ಸಂಪರ್ಕ ಕಲ್ಪಿಸುವುದರಿಂದ ಕೈದಿಗಳ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲ ಶ್ರೀಧರ್ ಪ್ರಭು, ‘ಜೈಲುಗಳ ಮೂಲಸೌಕರ್ಯದ ಬಗ್ಗೆ ಪ್ರಾಧಿಕಾರ ಈಗಾಗಲೇ ಗಮನಹರಿಸಿದೆ. ಆದಾಗ್ಯೂ, ಈಗ ಅರ್ಜಿದಾರರು ಹೇಳುತ್ತಿರುವ ಅಂಶವನ್ನೂ ಪರಿಗಣಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ವಿಚಾರಣೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News