ತೈವಾನ್ ಪ್ರಜೆಗಳನ್ನು ಹಸ್ತಾಂತರಿಸಲು ಚೀನಾದ ಒತ್ತಡ: ಮಾನವ ಹಕ್ಕು ಸಂಸ್ಥೆಯ ವರದಿ

Update: 2021-12-01 18:43 GMT

ಬೀಜಿಂಗ್, ಡಿ.1: ತೈವಾನ್‌ನ ಸ್ವಯಂ ಆಡಳಿತ ವ್ಯವಸ್ಥೆಯನ್ನು ಕಡೆಗಣಿಸುವ ಉದ್ದೇಶದಿಂದ, ತೈವಾನ್‌ನ ಪ್ರಜೆಗಳನ್ನು ತನ್ನ ವಶಕ್ಕೆ ನೀಡುವಂತೆ ವಿದೇಶದ ಸರಕಾರಗಳಿಗೆ ಚೀನಾ ಒತ್ತಡ ಹೇರುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.

ತೈವಾನ್‌ನ ಅಧ್ಯಕ್ಷೆಯಾಗಿ 5 ವರ್ಷದ ಹಿಂದೆ ತ್ಸೈ ಇಂಗ್‌ವೆನ್ ಆಯ್ಕೆಗೊಂಡಂದಿನಿಂದ ಈ ಒತ್ತಡ ಮತ್ತಷ್ಟು ಹೆಚ್ಚಿದೆ ಎಂದು ಮಾನವ ಹಕ್ಕುಗಳ ಸಂಘಟನೆ ‘ಸೇಫ್‌ಗಾರ್ಡ್ ಡಿಫೆಂಡರ್ಸ್’   ಹೇಳಿದೆ. 2016ರಿಂದ 2019ರ ನಡುವಿನ ಅವಧಿಯಲ್ಲಿ ವಿದೇಶದಿಂದ 610 ತೈವಾನ್ ಪ್ರಜೆಗಳನ್ನು ತೈವಾನ್‌ನ ಬದಲು ಚೀನಾಕ್ಕೆ ಹಸ್ತಾಂತರಿಸಲಾಗಿದ್ದು ಇದಕ್ಕೆ ಚೀನಾದ ತೀವ್ರ ಒತ್ತಡ ಕಾರಣವಾಗಿದೆ. ಏಶ್ಯಾದ ದೇಶಗಳಷ್ಟೇ ಅಲ್ಲ, ಸ್ಪೈನ್, ಅರ್ಮೇನಿಯಾ ಮತ್ತು ಕೆನ್ಯಾ ದೇಶಗಳೂ ಹಸ್ತಾಂತರಿಸಿವೆ. ಟೆಲಿಕಾಂ ವಂಚನೆ ಎಂಬ ಆರೋಪದಲ್ಲಿ ಹೆಚ್ಚಿನವರನ್ನು ಹಸ್ತಾಂತರಿಸಲಾಗಿದೆ ಎಂದು ಚೀನಾವನ್ನು ಕೇಂದ್ರೀಕರಿಸಿ ಮಾನವ ಹಕ್ಕು ಸಂಘಟನೆ ನಡೆಸಿದ ತನಿಖೆಯಲ್ಲಿ ಕಂಡುಬಂದಿದೆ.

ತೈವಾನ್ ಪ್ರಜೆಗಳ ಮೇಲಿನ ಈ ಅಂತರಾಷ್ಟ್ರೀಯ ಕಿರುಕುಳವು ತೈವಾನ್ ಸಾರ್ವಭೌಮತ್ವದ ಮೇಲಿನ ಆಕ್ರಮಣಕ್ಕೆ ಸಮವಾಗಿದೆ ಮತ್ತು ಹಸ್ತಾಂತರ ಒಪ್ಪಂದ, ಪರಸ್ಪರ ಕಾನೂನು ಜಾರಿ ಒಪ್ಪಂದವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವ ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಉದ್ದೇಶಗಳ ಒಂದು ಭಾಗವಾಗಿದೆ ಎಂದು ಬುಧವಾರ ಪ್ರಕಟವಾದ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ ತನ್ನ ಪ್ರದೇಶದ ಭಾಗ ಎಂದು ಚೀನಾ ಪ್ರತಿಪಾದಿಸುತ್ತಿದೆ. ಆದರೆ 2 ದಶಕದ ಹಿಂದೆ ಉಭಯ ಆಡಳಿತದ ನಡುವೆ ನಡೆದ ಒಪ್ಪಂದದಂತೆ, ಮೂರನೇ ದೇಶದಲ್ಲಿ ಅಪರಾಧ ಕೃತ್ಯ ಎಸಗಿದ ಆರೋಪಿಗಳನ್ನು ಆಯಾ ದೇಶಕ್ಕೇ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು. ಆದರೆ ಈ ಒಪ್ಪಂದವನ್ನು ಚೀನಾ ನಿರಂತರ ಕಡೆಗಣಿಸುತ್ತಿದೆ ಮತ್ತು ತೈವಾನ್‌ನ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕಿಯಾಗಿರುವ ತ್ಸೈ ಇಂಗ್‌ವೆನ್ ಅಧ್ಯಕ್ಷೆಯಾಗಿ ಆಯ್ಕೆಗೊಂಡ ಬಳಿಕ ಈ ವರ್ತನೆ ಮತ್ತಷ್ಟು ಹೆಚ್ಚಿದೆ ಎಂದು ‘ಸೇಫ್‌ಗಾರ್ಡ್ ಡಿಫೆಂಡರ್ಸ್ ಸಂಘಟನೆ ಹೇಳಿದೆ.

ತೈವಾನ್ ಪ್ರಜೆಗಳಿಗೆ ಕಾನ್ಸಲರ್ ಕಚೇರಿಯ ನೆರವು ಪಡೆಯಲು ಅಥವಾ ತೈವಾನ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡಲಾಗುವುದಿಲ್ಲ. ಒಮ್ಮೆ ಚೀನಾಕ್ಕೆ ಹಸ್ತಾಂತರಗೊಂಡ ಬಳಿಕ ಇವರಿಗೆ ತಮ್ಮ ಕುಟುಂಬವನ್ನು ಸಂಪರ್ಕಿಸಲೂ ಸಾಧ್ಯವಾಗುವುದಿಲ್ಲ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಯಿರುವ ದೇಶಕ್ಕೆ ಆತನನ್ನು ಯಾವ ದೇಶವೂ ಹಸ್ತಾಂತರಿಸುವಂತಿಲ್ಲ.

ಆದರೆ ಸ್ವೇಚ್ಛಾಚಾರದ ಬಂಧನ, ಬಲವಂತದ ನಾಪತ್ತೆ ಮತ್ತು ಬಲವಂತದ ತಪ್ಪೊಪ್ಪಿಗೆಯ ಕಾರ್ಯನೀತಿಗಳ ಮೂಲಕ ಚೀನಾ ಮೂಲಭೂತ ಮಾನವಹಕ್ಕುಗಳನ್ನು ನಿರಾಕರಿಸುತ್ತಿದೆ. ಈ ವಿಷಯದಲ್ಲಿ ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ತೈವಾನ್ ಪ್ರಜೆಗಳನ್ನು ಚೀನಾಕ್ಕೆ ಹಸ್ತಾಂತರಿಸುವುದನ್ನು ತಕ್ಷಣದಿಂದಲೇ ವಿರೋಧಿಸಬೇಕು ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News