ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ವಿಚಾರ: ಆಡಳಿತಾಧಿಕಾರಿಗೆ ಖುದ್ದು ಹಾಜರಿಗೆ ಹೈಕೋರ್ಟ್ ನಿರ್ದೇಶನ

Update: 2021-12-02 14:27 GMT

ಬೆಂಗಳೂರು, ಡಿ.2: ರಾಜ್ಯ ಒಕ್ಕಲಿಗರ ಸಂಘಕ್ಕೆ ಚುನಾವಣೆ ವಿಚಾರದಲ್ಲಿ ಮತದಾರರ ಪಟ್ಟಿ ಸರಿಪಡಿಸದೇ ಇರುವ ಸಂಘದ ಆಡಳಿತಾಧಿಕಾರಿಗೆ ಹೈಕೋರ್ಟ್ ಚಾಟಿ ಬೀಸಿದ್ದು, ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ನಿರ್ದೇಶನ ನೀಡಿದೆ. 

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠವು ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಆಡಳಿತಾಧಿಕಾರಿ ಸೂಕ್ತ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿತು. 

ವಿಚಾರಣೆ ವೇಳೆ, ಎಫ್‍ಐಆರ್ ದಾಖಲಾದ ಮೇಲೆ ಏನು ಕ್ರಮ ಕೈಗೊಂಡಿದ್ದಿರಿ. ಚುನಾವಣಾ ಮತದಾರರ ಪಟ್ಟಿ ಸರಿಪಡಿಸಿದ್ದೀರಾ. ಸಮರ್ಪಕ ಉತ್ತರ ನೀಡದಿದ್ದರೆ ಚುನಾವಣೆಗೆ ತಡೆ ನೀಡಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು. 

ಒಕ್ಕಲಿಗರ ಸಂಘಕ್ಕೆ ಒಳ್ಳೆಯ ಹೆಸರಿತ್ತು. ಶಿಕ್ಷಣ, ಚಿಕಿತ್ಸೆ, ಹಾಸ್ಟೆಲ್ ವ್ಯವಸ್ಥೆ ನೀಡಿದಂತಹ ಸಂಘ ಅದಾಗಿದೆ. ಕೆಲವರಿಂದ ಒಕ್ಕಲಿಗರ ಸಂಘದ ಘನತೆಗೆ ಧಕ್ಕೆಯಾಗಿದೆ. ಮುಂದಿನ ಜನಾಂಗಕ್ಕೆ ಒಕ್ಕಲಿಗರ ಸಂಘ ಉಳಿಸಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಡಿ.4ಕ್ಕೆ ಆಡಳಿತಾಧಿಕಾರಿ ಹಾಜರಿರುವಂತೆ ಸೂಚನೆ ನೀಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News