ಕಾಶ್ಮೀರದ ಮಾನವ ಹಕ್ಕುಗಳ ಹೋರಾಟಗಾರ ಖುರ್ರಂ ಪರ್ವೇಝ್ ಬಿಡುಗಡೆಗೆ ವಿಶ್ವಸಂಸ್ಥೆ ಕರೆ

Update: 2021-12-02 15:47 GMT
ಖುರ್ರಂ ಪರ್ವೇಝ್(photo:twitter/@KhurramParvez
 

ಶ್ರೀನಗರ,ಡಿ.2: ಕಠಿಣ ‘ಭಯೋತ್ಪಾದನೆ ನಿಗ್ರಹ’ ಕಾನೂನಿನಡಿ ಕಾಶ್ಮೀರದ ಪ್ರಮುಖ ಮಾನವಹಕ್ಕುಗಳ ಹೋರಾಟಗಾರ ಖುರ್ರಂ ಪರ್ವೇಝ್ ಅವರ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯು ಅವರ ಬಿಡುಗಡೆಗೆ ಕರೆ ನೀಡಿದೆ.

‘ಪರ್ವೇಝ್ ಅವರನ್ನು ಭಾರತದ ಭಯೋತ್ಪಾದನೆ ನಿಗ್ರಹ ಕಾನೂನು ಆಗಿರುವ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಬಂಧಿಸಲಾಗಿರುವುದು ನಮಗೆ ತೀವ್ರ ಕಳವಳವನ್ನುಂಟು ಮಾಡಿದೆ’ ಎಂದು ಬುಧವಾರ ಹೇಳಿಕೆಯಲ್ಲಿ ತಿಳಿಸಿರುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ (ಒಎಚ್‌ಸಿಎಚ್‌ಆರ್)ಯು,ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಇತರ ಮಾನದಂಡಗಳಿಗೆ ಅನುಗುಣವಾಗಿಸಲು ಯುಎಪಿಎಗೆ ತಿದ್ದುಪಡಿಯನ್ನು ತರುವಂತೆ ಆಗ್ರಹಿಸಿದೆ.

ನ.22ರಂದು ಸ್ಥಳೀಯ ಮಾನವ ಹಕ್ಕುಗಳ ಗುಂಪು ಜಮ್ಮು ಮತ್ತು ಕಾಶ್ಮೀರ ನಾಗರಿಕ ಸಮಾಜದ ಕೂಟದ ಸಂಚಾಲಕರಾದ ಪರ್ವೇಝ್ (44) ಅವರ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದ್ದ ಎನ್‌ಐಎ ಭಯೋತ್ಪಾದನೆಗೆ ಆರ್ಥಿಕ ನೆರವು ಮತ್ತು ಇತರ ಆರೋಪಗಳಲ್ಲಿ ಯುಎಪಿಎ ಮತ್ತು ಐಪಿಸಿಯಡಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಕೇಂದ್ರದ ತಿರಸ್ಕಾರ: ಪರ್ವೇಝ್ ಬಂಧನದ ಕುರಿತು ವಿಶ್ವಸಂಸ್ಥೆಯ ಹೇಳಿಕೆಯು ಭಾರತದ ಕಾನೂನು ಜಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದೆ ಮತ್ತು ಗಡಿಯಾಚೆಯ ಭೀತಿವಾದದಿಂದ ಭಾರತವು ಎದುರಿಸುತ್ತಿರುವ ಭದ್ರತಾ ಸಮಸ್ಯೆಗಳ ಕುರಿತು ಅದರ ತಿಳವಳಿಕೆಯ ಕೊರತೆಯನ್ನು ತೋರಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುವಾರ ಹೇಳಿದೆ.

ಪರ್ವೇಝ್ ಬಂಧನವು ಸಂಪೂರ್ಣವಾಗಿ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ನಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು,

ಒಎಚ್‌ಸಿಎಚ್‌ಆರ್ ಕಾಶ್ಮೀರಿ ಬಂಡುಕೋರರಿಗೆ ‘ಸಶಸ್ತ್ರ ಗುಂಪು’ಗಳು ಎಂಬ ಪದವನ್ನು ಬಳಸಿರುವುದನ್ನು ಆಕ್ಷೇಪಿಸಿದ್ದಾರೆ.

ನಿಷೇಧಿತ ಭಯೋತ್ಪಾದಕ ಸಂಘಟನೆಗಳನ್ನು ‘ಸಶಸ್ತ್ರ ಗುಂಪು’ಗಳು ಎಂದು ಉಲ್ಲೇಖಿಸಿರುವುದು ಒಎಚ್‌ಸಿಎಚ್‌ಆರ್‌ನ ಪಕ್ಪಪಾತವನ್ನು ಸ್ಪಷ್ಟವಾಗಿ ತೋರಿಸಿದೆ ಎಂದು ಅವರು ಹೇಳಿದ್ದಾರೆ.

ಯುಎಪಿಎ ಅನ್ನು ಸಮರ್ಥಿಸಿಕೊಂಡಿರುವ ಹೇಳಿಕೆಯು,ಅದು ಭಾರತದ ಸಾರ್ವಭೌಮತೆಯನ್ನು ರಕ್ಷಿಸಲು ಮತ್ತು ತನ್ನ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಸತ್ತು ಜಾರಿಗೊಳಿಸಿರುವ ಕಾನೂನು ಆಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News