ವಿರಾಜಪೇಟೆ: ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಶವವಾಗಿ ಪತ್ತೆ; ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಪತ್ನಿ

Update: 2021-12-02 16:33 GMT

ಮಡಿಕೇರಿ ಡಿ.2 : ಮನೆಯಿಂದ ತೆರಳಿದ್ದ ವ್ಯಕ್ತಿಯೊಬ್ಬರು ಕಾಣೆಯಾಗಿ ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ವಿರಾಜಪೇಟೆ ಹೊರವಲಯ ನಾಂಗಾಲ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಮಾಜೀ ಸದಸ್ಯ, ನಾಂಗಾಲ ಗ್ರಾಮ ನಿವಾಸಿ ಬೊಪ್ಪಂಡ ವಸಂತ್ ಅಯ್ಯಪ್ಪ(46) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಬೊಪ್ಪಂಡ ವಸಂತ್ ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರಾಗಿದ್ದು, ಬುಧವಾರ ದಿನ ಎಂದಿನಂತೆ ತಮ್ಮ ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿಲು ತಮ್ಮ ದ್ವಿಚಕ್ರ ವಾಹನದಲ್ಲಿ ನಾಂಗಾಲದಲ್ಲಿರುವ ಮನೆಗೆ ಆಗಮಿಸಿದ್ದಾರೆ. ಬಳಿಕ ತೋಟ ಕಾರ್ಮಿಕರಿಗೆ ಸಂಬಳ ನೀಡಿ ಬರುವುದಾಗಿ ಪತ್ನಿ ಶಕುಂತಲಾ ಅವರಿಗೆ ತಿಳಿಸಿ ತೋಟಕ್ಕೆ ತೆರಳಿದ್ದಾರೆ. ತೋಟಕ್ಕೆ ತೆರಳಿದ ಪತಿ ಸಂಜೆಯಾದರು ಮನೆಗೆ ಹಿಂದಿರುಗದ ಕಾರಣ ಶಕುಂತಲಾ ಎಲ್ಲೆಡೆ ಹುಡುಕಾಟ ನಡೆಸಿದ್ದರೂ ವಸಂತ್ ಪತ್ತೆಯಾಗಿರಲಿಲ್ಲ. 

ಈ ಹಿನ್ನೆಲೆಯಲ್ಲಿ ಶಕುಂತಲ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ವಸಂತ್ ಕಾಣೆಯಾಗಿರುವ ಕುರಿತು ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದಾಗ ಗುರುವಾರ ಬೆಳಗ್ಗೆ ನಾಂಗಾಲದ ಪೊಗ್ಗರೆ ಕೆರೆಯಿಂದ ರಸ್ತೆಯಂಚಿನಲ್ಲಿ ವಸಂತ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿದೆ. 

ಇದರಿಂದ ಅನುಮಾನಗೊಂಡ ಪೊಲೀಸರು ಮುಳುಗು ತಜ್ಞರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಪೊಗ್ಗೆರೆ ಕೆರೆಯಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಕಾಣೆಯಾಗಿದ್ದ ವಸಂತ್ ಅವರ ಮೃತದೇಹ ಪತ್ತೆಯಾಗಿದೆ. 

ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಬಿ.ಬಾಣಸೆ, ಎ.ಎಸ್.ಐ. ಸುಬ್ರಮಣಿ ಅವರುಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು. 

ಮೃತರ ಪತ್ನಿ ಶಕುಂತಲ ತಮ್ಮ ಪತಿಯ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News