35 ವರ್ಷಗಳ ಪ್ರೇಮ ಫಲಿಸಿತು!: 65ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜೋಡಿ

Update: 2021-12-03 05:04 GMT

ಮಂಡ್ಯ: ಪ್ರೀತಿಗೆ ಹಣ, ಅಂತಸ್ತು, ವಯಸ್ಸು ಇದ್ಯಾವುದೂ ಅಡ್ಡಿಯಾಗದು ಎನ್ನುತ್ತಾರೆ. ಅದಕ್ಕೆ ಸ್ಪಷ್ಟ ನಿದರ್ಶನದಂತಿತ್ತು ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ನಡೆದ ಈ ಅಪರೂಪದ ವಿವಾಹ!.

ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದ ಹೆಬ್ಬಾಳದ ಚಿಕ್ಕಣ್ಣ ಮತ್ತು ಅವರ ಅತ್ತೆ ಮಗಳಾದ ಮೈಸೂರಿನ ಜಯಮ್ಮ ಅವರ ವಿವಾಹವು ಗುರುವಾರ ಮೇಲುಕೋಟೆಯ ಚಲುವರಾಯಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಶ್ರೀನಿವಾಸ್ ಗುರೂಜಿ ಅವರ ಆಶ್ರಮದಲ್ಲಿ ನೆರವೇರಿತು. ಇದರಲ್ಲೇನು ವಿಶೇಷ ಅಂತೀರಾ? ಇವರು ಪ್ರೇಮಿಗಳು... ಅದು 35 ವರ್ಷಗಳ ಸುದೀರ್ಘವಾದ ಪ್ರೇಮಕಥೆ..!. ಆದರೆ ಇವರು ಮದುವೆಯಾಗಿದ್ದು ತಮ್ಮ 65ನೇ ವಯಸ್ಸಿನಲ್ಲಿ!

ಚಿಕ್ಕಣ್ಣ ಹಿಂದೆ ಮೈಸೂರಿನಲ್ಲಿ ಕೂಲಿಕೆಲಸ ಮಾಡುತ್ತಿದ್ದ ವೇಳೆ ಅತ್ತೆ ಮಗಳಾದ ಮೈಸೂರಿನ ಜಯಮ್ಮರನ್ನು ಪ್ರೇಮಿಸುತ್ತಿದ್ದರು. ಆದರೆ ವಿವಾಹ ಪ್ರಸ್ತಾಪವನ್ನು ಒಪ್ಪದ ಜಯಮ್ಮ ಮನೆಯವರು ಅವರಿಗೆ ಬೇರೆ ವಿವಾಹ ಮಾಡಿದ್ದರು. ಅತ್ತ ಜಯಮ್ಮ ಸಿಗದೆ ನೊಂದಿದ್ದ ಚಿಕ್ಕಣ್ಣ ಮದುವೆ ಆಗಿರಲಿಲ್ಲ. ಜಯಮ್ಮ ದೂರವಾದರೂ ಅವರ ನೆನಪಲ್ಲೇ 35 ವರ್ಷಗಳನ್ನು ಕಳೆದಿದ್ದರು.

ಬಳಿಕದ ಬೆಳವಣಿಗೆಯಲ್ಲಿ ಜಯಮ್ಮರನ್ನು ಅವರ ಪತಿ ತೊರೆದು ಹೋಗಿದ್ದರು. ಜಯಮ್ಮರಿಗೆ ಮಕ್ಕಳಿರಲಿಲ್ಲ. ಈ ನಡುವೆ ಜಯಮ್ಮ ಮತ್ತು ಚಿಕ್ಕಣ್ಣ ಭೇಟಿಯಾಗಿದ್ದರು. ಇಬ್ಬರೂ ಪರಸ್ಪರ ಒಪ್ಪಿ ವಿವಾಹವಾಗಲು ನಿರ್ಧರಿಸಿದರು. ಅದರಂತೆ ಗುರುವಾರ ಡಿಸೆಂಬರ್ 2ರಂದು ಈ ಜೋಡಿ ಮೇಲುಕೋಟೆಯ ಚಲುವರಾಯಸ್ವಾಮಿ ದೇವಾಲಯದ ಮುಂಭಾಗದಲ್ಲಿ ಇರುವ ಶ್ರೀನಿವಾಸ್ ಗುರೂಜಿ ಆಶ್ರಮದಲ್ಲಿ ಸತಿಪತಿಗಳಾದರು. ಆ ಮೂಲಕ 35 ವರ್ಷಗಳ ಬಳಿಕ ಈ ಸುದೀರ್ಘ ಕಾಲದ ಪ್ರೇಮಿಗಳು ಒಂದಾಗಿದ್ದಾರೆ. 

65 ವರ್ಷ ವಯಸ್ಸಿನ ಚಿಕ್ಕಣ್ಣ ಮತ್ತು ಜಯಮ್ಮ, ನವ ವಧು-ವರರಂತೆ ಹೊಸ ಬಟ್ಟೆ ಧರಿಸಿ ಹಣೆಗೆ ಬಾಸಿಂಗ ಧರಿಸಿ ಕಂಗೊಳಿಸಿದರು. ಮೈಸೂರು ಪೇಟ ತೊಟ್ಟ ಜಯಣ್ಣ, ತಮ್ಮ ಬಹುಕಾಲದ ಪ್ರೇಯಸಿ ಜಯಮ್ಮರಿಗೆ ಶಾಸ್ತ್ರೋಕ್ತವಾಗಿ ಮಾಂಗಲ್ಯ ಧಾರಣೆ ಮಾಡಿದರು.
ಈ ಮೂಲಕ 30 ವರ್ಷಗಳ ಬಳಿಕ ಪ್ರೇಮಿಗಳು ವಿವಾಹ ಬಂಧನದಲ್ಲಿ ಒಂದಾದರು. ಈ ವಿವಾಹಕ್ಕೆ ವಧು-ವರರ ಆಪ್ತರು, ಗೆಳೆಯರು ಸಾಕ್ಷಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News