×
Ad

ಬಿಜೆಪಿ ಸರಕಾರದ ಆಡಳಿತದಿಂದಾಗಿ ರಾಜ್ಯದ ಗೌರವ ನಾಶವಾಗಿದೆ: ಡಿ.ಕೆ.ಶಿವಕುಮಾರ್

Update: 2021-12-03 22:01 IST

ಚಿಕ್ಕಮಗಳೂರು, ಡಿ.3: ಗುತ್ತಿಗೆದಾರ ಸಂಘದ ಆರೋಪದಂತೆ ರಾಜ್ಯ ಸರಕಾರ ಭಷ್ಟಾಚಾರದಲ್ಲಿ ಮುಳುಗಿರುವುದು ಸತ್ಯ. ಕಮೀಶನ್ ಹೆಸರಿನಲ್ಲಿ ಸರಕಾರದ ಮಂತ್ರಿಗಳು, ಶಾಸಕರು, ಅಧಿಕಾರಿಗಳು ಲಂಚ ತಿನ್ನುವ ಉದ್ದೇಶದಿಂದ ರಾಜ್ಯ ಸರಕಾರ ಕಾಮಗಾರಿಗಳ ಅಂದಾಜು ವೆಚ್ಚವನ್ನು ಡಬಲ್ ಮಾಡುತ್ತಿದೆ. ಚುನಾವಣೆ ಬಳಿಕ ಈ ಅಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ರೂಪಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಿಜೆಪಿಯವರಿಗೆ ನೀಡಿದ ಅಧಿಕಾರವನ್ನು ಭಷ್ಟಾಚಾರ ಮಾಡಲು ದುರ್ಬಳಕೆ ಮಾಡುತ್ತಿದ್ದಾರೆ. ರಾಜ್ಯದ ಗುತ್ತಿಗೆದಾರರ ಸಂಘದ 40 ಪರ್ಸೆಂಟ್ ಲಂಚ ನೀಡದೇ ಸರಕಾರ ಕಾಮಗಾರಿಗಳ ಎನ್‍ಒಸಿ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿರುವುದು ಸರಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಯಾವುದೇ ಕಾಮಗಾರಿಗೆ ಶೇ.ರಷ್ಟು ಲಂಚವನ್ನು ಸರಕಾರದ ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ನೀಡಿದರೇ ಉಳಿದ ಮೊತ್ತದಲ್ಲಿ ಗುಣಮಟ್ಟದ ಕೆಲಸ ಮಾಡಲೂ ಸಾಧ್ಯವಿಲ್ಲ. ಇದಕ್ಕಾಗಿ ಬಿಜೆಪಿ ಸರಕಾರ ಕಾಮಗಾರಿಗಳ ಎಸ್ಟಿಮೇಟ್ ಅನ್ನೇ ದುಪ್ಪಟ್ಟು ಮಾಡಲು ಮುಂದಾಗಿದೆ. ಬೆಂಗಳೂರು ನಗರದಲ್ಲಿ ಲೋಕೋಪಯೋಗಿ, ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಕಾಮಗಾರಿಗಳ ಎಸ್ಟಿಮೇಟ್‍ನ ಡಬಲ್ ಮಾಡಲಾಗುತ್ತಿದೆ. 100 ಕೋಟಿ ಎಸ್ಟಿಮೇಟ್ ಮಾಡಿದ್ದರೇ ಅದನ್ನು 200 ಕೋಟಿ ಮಾಡಲಾಗುತ್ತಿದೆ. ಈ ಮೂಲಕ ಸರಕಾರ ಕಮೀಶನ್ ನೆಪದಲ್ಲಿ ಸರಕಾರದ ಖಜಾನೆ ಲೂಟಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ಈ ಹಿಂದೆ ಕರ್ನಾಟಕ ರಾಜ್ಯಕ್ಕೆ ಅಭಿವೃದ್ಧಿಯಲ್ಲಿ ಉತ್ತಮ ಹೆಸರಿತ್ತು. ಭಷ್ಟಾಚಾರದ ಕಳಂಕವಿಲ್ಲದೇ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿತ್ತು. ಆದರೆ ಬಿಜೆಪಿ ಸರಕಾರದ ಆಡಳಿತದಿಂದಾಗಿ ರಾಜ್ಯಕ್ಕಿದ್ದ ಗೌರವ ನಾಶವಾಗಿದೆ. ಕೋವಿಡ್ ಸಂದರ್ಭ ಬೆಡ್‍ಗಳು, ಔಷಧ ಸೇರಿದಂತೆ ಸತ್ತವರ ಹೆಣಗಳ ಮೇಲೂ ಹಣ ಮಾಡಿದರು. ಸೋಂಕಿಗೆ ತುತ್ತಾದವರಿಗೆ ಆಕ್ಸಿಜನ್ ಸೇರಿದಂತೆ ಅಗತ್ಯ ಚಿಕಿತ್ಸೆ ಸಿಗದೇ 4 ಲಕ್ಷ ಜನರು ಸಾವಿಗೀಡಾಗಿದ್ದಾರೆ. ಸತ್ತವರ ದಾಖಲೆಯೇ ಸರಕಾರದ ಬಳಿ ಇಲ್ಲ ಎಂದು ಆರೋಪಿಸಿದ ಅವರು, ವಿದೇಶಗಳಿಂದ ಬರುವವರ ತಪಾಸಣೆ, ಪರೀಕ್ಷೆ ಹೆಸರಿನಲ್ಲಿ ವಿಮಾನ ನಿಲ್ದಾಣಗಳಲ್ಲಿ 3 ಸಾವಿರ ರೂ. ವಸೂಲಿ ಮಾಡಲಾಗುತ್ತಿದೆ. ವಿದೇಶದಿಂದ ಬರುವವರಿಗೆ ಪರೀಕ್ಷೆ ಹೆಸರಿನಲ್ಲಿ ಕಿರುಕುಳ ನೀಡುತ್ತಾ ಸುಲಿಗೆ ಮಾಡಲಾಗುತ್ತಿದೆ. ಇದರ ಕಮೀಶನ್ ಯಾರಿಗೆ ಹೋಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಜಿ.ಪಂ, ತಾ.ಪಂ ಚುನಾವಣೆ ನಡೆಸದೆ ಬಿಜೆಪಿ ಸರಕಾರ ಜನರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿಲ್ಲ. ನಮ್ಮ ಸರಕಾರ ಇದ್ದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ 2-3 ಕೋಟಿ ಅನುದಾನ ನೀಡಿದ್ದೇವೆ. ಬಿಜೆಪಿ ಸರಕಾರದ ಅವಧಿಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ ಅನುದಾನವೇ ನೀಡಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲು ಬಿಜೆಪಿ ಸರಕಾರ ಮಾಡಿದ ಒಂದೇ ಒಂದು ಒಳ್ಳೆಯ ಕೆಲಸವನ್ನು ಹೇಳಲಿ ಎಂದು ಸವಾಲು ಹಾಕಿದರು.

ಕೃಷಿ ತಿದ್ದುಪಡಿ ಮಸೂದೆಗಳ ಜಾರಿ ವಿರೋಧಿಸಿ ರೈತರು ಚಳವಳಿ ಮಾಡಿದಾಗ ಅವರನ್ನು ಉಗ್ರಗಾಮಿಗಳು ಎಂದು ಬಿಜೆಪಿಯವರು ಕರೆದರು. ಕಾಂಗ್ರೆಸ್ ಪೋಷಿತ ನಾಟಕ ಮಂಡಳಿ ಎಂದು ಕರೆದು ರೈತರನ್ನು ಅವಮಾನಿಸಿದರು. ಕಾಂಗ್ರೆಸ್ ಪಕ್ಷ ಯಾವಾಗಲೂ ರೈತರ ಪರ ಇರುವ ಪಕ್ಷ, ರೈತರ ಹೋರಾಟಕ್ಕೆ ನಮ್ಮ ಬೆಂಬಲವೂ ಇತ್ತು ಎಂದ ಅವರು ಸದ್ಯ ರೈತರ ಹೋರಾಟಕ್ಕೆ ಮಣಿದ ಸರಕಾರ ಮಸೂದೆ ಹಿಂಪಡೆಯುವ ಮೂಲಕ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ರೈತರನ್ನು ಉಗ್ರಗಾಮಿಗಳು ಎಂದಿದ್ದಕ್ಕೆ ಕ್ಷಮೆಯಾಚಿಸಬೇಕೆಂದ ಅವರು, ಚಳವಳಿಯಲ್ಲಿ ಹುತಾತ್ಮರಾದ 700 ರೈತರ ಪ್ರಾಣಕ್ಕೆ ಸರಕಾರವೇ ಹೊಣೆ ಎಂದು ಆರೋಪಿಸಿದರು.

ಅತಿವೃಷ್ಟಿ, ಅಕಾಲಿಕ ಮಳೆ, ಪ್ರವಾಹದಿಂದ ರಾಜ್ಯಾದ್ಯಂತ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕಾಫಿ, ಅಡಿಕೆ, ಮೆಣಸು ಬೆಳೆ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಸರ್ಫೇಸಿ ಕಾಯ್ದೆ ಮೂಲಕ ರೈತರ ತೋಟಗಳನ್ನು ಹಾರಾಜು ಹಾಕಲು ಬ್ಯಾಂಕ್‍ಗಳಿಗೆ ಅವಕಾಶ ನೀಡುವ ಮೂಲಕ ರೈತರು, ಬೆಳೆಗಾರರ ವಿರೋಧಿ ಆಡಳಿತ ನೀಡುತ್ತಿದೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್, ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಕಾಂಗ್ರೆಸ್ ಸರಕಾರ ನೀಡಿದ ಕೊಡುಗೆಗಳ ಆಧಾರದ ಮೇಲೆ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಈ ಮೂಲಕ ಬಿಜೆಪಿಯವರ ಭ್ರಷ್ಟಾಚಾರದ ಆಡಳಿತ ತೊಲಗಿಸಿ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವ ಮೂಲಕ ಗ್ರಾಮ ಸ್ವರಾಜ್ಯ ಕಲ್ಪನೆಯ ಸಾಕಾರಕ್ಕೆ ಅನುವು ಮಾಡಿಕೊಡಬೇಕು. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲ್ಲಿದ್ದೇವೆ. ಸ್ಥಳೀಯ ಸಂಸ್ಥೆ ಮತದಾರರು ನಮ್ಮ ಧ್ವನಿಯಾಗಿ, ನಾವು ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತೇವೆ ಎಂದರು.

ಒಮಿಕ್ರಾನ್ ವೈರಸ್ ಅಲ್ಲಲ್ಲಿ ವರದಿಯಾಗುತ್ತಿದೆ. ಈ ಸಂವಂಧ ಭಯದ ವಾತವರಣ ಸೃಷ್ಟಿಸಬಾರದು. ಸರಕಾರದ ಆರೋಗ್ಯ ಇಲಾಖೆ ಮುಂಜಾಗೃತ ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ಸರಕಾರಕ್ಕೆ ನಾವು ರೀತಿಯ ಸಹಕಾರ ನೀಡುತ್ತಿದ್ದೇವೆ. ನಾವು ಯಾವುದಕ್ಕೂ ಅಡ್ಡಿ ಬರುವುದಿಲ್ಲ. ಈಗಾಗಲೇ ಇಡೀ ದೇಶದ ಜನರು ನರಳುತ್ತಿದ್ದಾರೆ. ಭಯ ಉಂಟು ಮಾಡಬೇಡಿ. ಎಲ್ಲಾ ವ್ಯವಹಾರ ನಿಲ್ಲುವಂತಾಗಬಾರದು, ಜಾಗ್ರತೆ ಇರಬೇಕು, ಇದರಲ್ಲೂ ಲಂಚ ಹೊಡೆಯುವುದನ್ನು ಸರಕಾರ ಮಾಡಬಾರದು.

- ಡಿಕೆ ಶಿವಕುಮಾರ್
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News