ಮೈಸೂರು: ಅಂಬೇಡ್ಕರ್ ಪ್ರತಿಮೆ ತೆರವಿಗೆ ವಿರೋಧ; ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಯುವಕ

Update: 2021-12-04 06:41 GMT

ಮೈಸೂರು: ನಗರದ ಪಡುವಾರಹಳ್ಳಿಯ ಮಾತೃಮಂಡಳಿ ವೃತ್ತದಲ್ಲಿ ರಾತ್ರೋ ರಾತ್ರಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿದ್ದನ್ನು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನಲೆಯಲ್ಲಿ ಅಭಿಮಾನಿ ಯುವಕನೊಬ್ಬ ಕತ್ತು ಕುಯ್ದುಕೊಂಡು  ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ ದಲಿತ ಸಂಘಟನೆಗಳು ಸೇರಿದಂತೆ ಪಡುವಾರಹಳ್ಳಿ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಪಡುವಾರಹಳ್ಳಿಯ ಅಂಬೇಡ್ಕರ್ ಯುವಕರ ಸಂಘ ಹಾಗೂ ವಿನಾಯಕ ಗರಳೆಯರ ಬಳಗದ ಸದಸ್ಯರುಗಳು ಡಿ.6 ರಂದು ಅಂಬೇಡ್ಕರ್ ಪರಿನಿಬ್ಬಾಣ  ದಿನದ ಅಂಗವಾಗಿ ಮಾತೃಮಂಡಳಿ ವೃತ್ತದಲ್ಲಿ  ಶುಕ್ರವಾರ ತಡರಾತ್ರಿ ಕಂಚಿನ ಎಂಟು ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರು. ವಿಷಯ ತಿಳಿದ ನಗರಪಾಲಿಕೆ ಅಧಿಕಾರಿಗಳು ಪೊಲೀಸರೊಂದಿಗೆ ಆಗಮಿಸಿ ಅನುಮತಿ ಪಡೆಯದೆ ಹೀಗೆ ಏಕಾ ಏಕಿ ಪ್ರತಿಮೆ ನಿರ್ಮಾಣ ಮಾಡುವುದು ಸರಿಯಲ್ಲ ಎಂದು ಪ್ರತಿಮೆಯನ್ನು ತೆರವುಗೊಳಿಸಿದರು. ಈ ವೇಳೆ ವಿರೋಧ ವ್ಯಕ್ತಪಡಿಸಿದ ರಾಜೇಶ್ ಎಂಬ ಯುವಕ ಬ್ಲೇಡ್ ನಿಂದ ತನ್ನ ಕತ್ತನ್ನು ಕುಯ್ದುಕೊಂಡು ಆತ್ಮಹತ್ಯೆಗೆ  ಯತ್ನಿಸಿದ್ದಾನೆ.‌ ತಕ್ಷಣ ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇದರಿಂದ ರೊಚ್ಚಿಗೆದ್ದ ಯವಕರುಗಳು ಮತ್ತು ಗ್ರಾಮಸ್ಥರು ನಗರಪಾಲಿಕೆ ಅಧಿಕಾರಿಗಳ ಕ್ರಮವನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳೊಡಗೂಡಿ ಪ್ರತಿಭಟನೆ ಕುಳಿತಿದ್ದಾರೆ. 

ಇದೇ ವೇಳೆ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಮಾತೃಮಂಡಳಿ ಬಳಿ ಇರುವ ಈ ವೃತ್ತವನ್ನು ಕಳೆದ 12 ವರ್ಷಗಳಿಂದಕೂ ಅಂಬೇಡ್ಕರ್ ವೃತ್ತ ಮಾಡಬೇಕೆಂದು ಇಲ್ಲಿನ ಯವಕರು ಸಂಬಂಧಪಟ್ಟವರಿಗೆ ಮನವಿ ಮಾಡುತ್ತಿದ್ದಾರೆ. ಆದರೆ ಯಾರೂ ಇದರ ಬಗ್ಗೆ ಗಮನಹರಿಸಲಿಲ್ಲ, ಹಾಗಾಗಿ ಡಿ.6 ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಬರುತ್ತಿರುವುದರಿಂದ ಇಲ್ಲಿನ ಯುವಕರು ಮತ್ತು ಗ್ರಾಮಸ್ಥರು ಅವರ ಸ್ವಂತ ಹಣದಿಂದ ಎಂಟು ಅಡಿ ಕಂಚಿನಿಂದ ಮಾಡಿಸಲಾದ ಪ್ರತುಮೆಯನ್ನು ನಿಲ್ಲಿಸಿದ್ದಾರೆ. ಇದು ಮಹಾಪರಾಧ ಎನ್ನುವಂತೆ ಪಾಲಿಕೆ ಅಧಿಕಾರಿಗಳು ಏಕಾ ಏಕಿ ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿರುವುದು ಅತ್ಯಂತ ಖಂಡನೀಯ ಎಂದರು.

ಅನುಮತಿ ಪಡೆದಿಲ್ಲ ಎಂದು ಅಂಬೇಡ್ಕರ್ ಪ್ರತಿಮೆ ತೆರವುಗೊಳಿಸುವುದಾದರೆ ಮೈಸೂರಿನಲಲ್ಲಿ ನಿರ್ಮಾಣ ಮಾಡಲಾಗಿರುವ ಎಲ್ಲಾ ಪ್ರತಿಮೆಗಳಿಗೂ ಅನುಮತಿ ಪಡೆಯಲಾಗಿದಿಯೇ? ಇದೇ ಪಡುವಾರಹಳ್ಳಿ ಸೇರಿದಂತೆ ಮೈಸೂರಿನ ಅನೇಕ ಕಡೆಗಳಲ್ಲಿ ಇತ್ತೀಚೆಗೆ ಹಾಕಲಾಗಿರುವ ನಾಲ್ಕು ಪ್ರತಿಮೆಗಳಿಗೆ ಅನುಮತಿಯೇ ಪಡೆದಿಲ್ಲ, ಹಾಗಿದ್ದ ಮೇಲೆ ಅವುಗಳನ್ನು ಏಕೆ ತೆರವುಗೊಳಿಸಲಿಲ್ಲ ಎಂದು ಪ್ರಶ್ನಿಸಿದರು.

ದಲಿತರು ಎಂದರೆ ಒಂದುತರಹ ಇತರೆ ವರ್ಗ ಎಂದರೆ ಮತ್ತೊಂದು ತರಹ, ಇಂತಹ ತಾರತಮ್ಯದಿಂದಲೇ ನಮ್ಮ ಹಕ್ಕನ್ನು ಚಕಾಯಿಸಲು ಇಲ್ಲಿನ ಯುವಕರು ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿದ್ದರು ಎಂದು ಹೇಳಿದರು.

ನಮಗೆ ಈ ಕೂಡಲೇ ಅಂಬೇಡ್ಕರ್ ಪ್ರತಿಮೆಯನ್ನು ವಾಪಸ್ ತಂದುಕೊಡಬೇಕು ಎಂದು ಪಟ್ಟು ಹಿಡಿದು ಪ್ರತಿಮೆ ನಿರ್ಮಾಣ ಮಾಡಿದ ಸ್ಥಳದಲ್ಲೇ ಧರಣಿ ಕುಳಿತರು.

ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿರುವುದನ್ನು ಅರಿತ ಪೊಲೀಸರು ಹೆಚ್ಚಿನ ಸಿಬ್ಬಂಧಿಗಳನ್ನು ಸ್ಥಳಕ್ಕೆ ನಿಯೋಜಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಪ್ರತಿಭಟನಾಕಾರರ ಮನವೊಲಿಸುವ  ಪ್ರಯತ್ನ ಮಾಡಿದರು. ನೀವು ಪ್ರತಿಮೆ ನಿರ್ಮಾಣ ಮಾಡಿರುವ ಜಾಗದಲ್ಲೇ ಪ್ರತಿಮೆ ನಿರ್ಮಾಣ ಮಾಡಿಸುತ್ತೇನೆ.‌ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮತಿ ಪಡೆದು ನಂತರ ನಾನೇ ನಿಮ್ಮೊಂದಿಗೆ ಸೇರಿಕೊಂಡು ಪ್ರತಿಮೆ ನಿರ್ಮಾಣ ಮಾಡಿಸುತ್ತೇನೆ ಎಂಬ ಭರವಸೆ ಮೇರೆಗೆ ಪ್ರತಿಭಟನಾಕಾರರು ಒಪ್ಪಿಗೆ ಸೂಚಿಸಿದರು.

ತಕ್ಷಣ ಪಾಲಿಕೆ ಅಧಿಕಾರಿಗಳಿಗರ ದೂರವಾಣಿ ಕರೆ ಮಾಡಿ ಅಂಬೇಡ್ಕರ್ ಪ್ರತಿಮೆಯನ್ನು ವಾಪಾಸ್ ತಂದುಕೊಡುವಂತೆ ಆದೇಶಿದ ನಂತರ ಪಾಲಿಕೆ ಅಧಿಕಾರಿಗಳು ಪ್ರತಿಮೆಯನ್ನು ತಂದುಕೊಟ್ಟಿದ್ದಾರೆ.

ಇದೀಗ ಪ್ರತಿಭಟನಾಕಾರರು ಸ್ಥಳದಿಂದ ನಿರ್ಗಮಿಸಿದ್ದು, ಪ್ರತಿಮೆ ನಿರ್ಮಾಣದ ಕುರಿತು ಅಂಬೇಡ್ಕರ್ ಭವನದಲ್ಲಿ ಸಭೆ ನಡೆಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ ಸಿದ್ದರಾಜು ಸೋಸಲೆ, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ ಮಹದೇವು ಸೇರಿದಂತೆ ನೂರಾರು ಮಂದಿ ಭಾಗವಹಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News