ಕನ್ನಡದ ಹಿರಿಯ ನಟ ಶಿವರಾಂ ನಿಧನ

Update: 2021-12-04 10:57 GMT
photo: twitter (ಶಿವರಾಂ)

ಬೆಂಗಳೂರು, ಡಿ.4: ಕನ್ನಡ ಚಿತ್ರರಂಗದ ಹಿರಿಯನಟ, ನಿರ್ದೇಶಕ, ನಿರ್ಮಾಪಕ ಶಿವರಾಂ(83) ಅವರು ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ನಿಧನರಾಗಿದ್ದಾರೆ.

ಶಿವರಾಮ್ ಅವರು ತಮ್ಮ ಮನೆಯಲ್ಲಿ ಕುಸಿದು ಬಿ️ದ್ದು ಅಸ್ವಸ್ಥಗೊಂಡಿದ್ದರು. ಬಳಿಕ ಅವರ ಪುತ್ರ ಇಲ್ಲಿನ ಸೀತಾ ಸರ್ಕಲ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲ️ಕಾರಿಯಾಗದೆ ಕೊನೆಯುಸಿರೆಳೆದರು ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡು ಮನೆಗೆ ಬಂದಿದ್ದರು. ಆದರೆ, ಪುನಃ ಕೆಳಗೆ ಬಿ️ದ್ದ ಪರಿಣಾಮ ತಲೆಗೆ ಗಂಭೀರವಾಗಿ ಪೆಟ್ಟು ಬಿ️ದ್ದಿತ್ತು ಎನ್ನಲಾಗಿದೆ. 

ಕನ್ನಡ ಚಿತ್ರರಂಗದ ಹಿರಿಯ ನಟರಾಗಿ ಆಧ್ಯಾತ್ಮಿಕ ಕ್ಷೇತ್ರದಲ️್ಲೂ ಸಾಕಷ್ಟು ಹೆಸರು ಮಾಡಿರುವ ಶಿವರಾಂ ಅವರು ಸದಾ ಲ️ವಲ️ವಿಕೆಯಿಂದ ಇದ್ದರು. ಕನ್ನಡ ಚಿತ್ರರಂಗದಲ್ಲಿ ‘ಶಿವರಾಮಣ್ಣ’ ಎಂದೇ ಹೆಸರುವಾಸಿಯಾಗಿದ್ದರು.  

ಚಿಕ್ಕವಯಸ್ಸಿನಲ್ಲೇ ನಟನೆಯತ್ತ ಆಸಕ್ತಿ ಬೆಳೆಸಿಕೊಂಡ ಶಿವರಾಂ ನಾಟಕಗಳಲ್ಲಿ  ಅಭಿನಯಿಸಲು ಆರಂಭಿಸಿದರು. ಕು.ರಾ.ಸೀತಾರಾಮಶಾಸ್ತ್ರಿ ಅವರಿಗೆ ಸಹಾಯಕರಾಗಿ ಕೆಲ️ಸ ಮಾಡುವ ಮೂಲ️ಕ ಕನ್ನಡ ಚಿತ್ರರಂಗಕ್ಕೆ ಶಿವರಾಂ ಪದಾರ್ಪಣೆ ಮಾಡಿದರು. 

ಕೆ.ಎಸ್.ಎಲ್.ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸ್‍ರಾವ್ ಮತ್ತು ಪುಟ್ಟಣ್ಣ ಕಣಗಾಲ್‍ರಿಗೆ ಶಿವರಾಂ ಸಹಾಯಕ ನಿರ್ದೇಶಕರಾಗಿದ್ದರು. ಶರಪಂಜರ, ನಾಗರಹಾವು, ಶುಭಮಂಗಳ, ಬಂಗಾರದ ಪಂಜರ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿ️ಸಿಲು, ಗುರು ಶಿಷ್ಯರು ಮುಂತಾದ ಅನೇಕ ಸಿನಿಮಾಗಳಲ್ಲಿ ಶಿವರಾಂ ಪೋಷಕ ಪಾತ್ರ ನಿರ್ವಹಿಸಿದ್ದರು. 

ಸುದ್ದಿ ತಿಳಿಯುತ್ತಿದ್ದಂತೆ ಚಿತ್ರರಂಗದ ಹಲ️ವು ಗಣ್ಯರು ಆಸ್ಪತ್ರೆಗೆ ತೆರಳಿ, ಅವರ ಪಾರ್ಥಿವ ಶರೀರದ ದರ್ಶನ ಪಡೆದರು.

ಸಂತಾಪ: ಹಿರಿಯ ಕಲಾವಿದ ಶಿವರಾಂ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News