ಕೋವಿಡ್‍ನ ಮೂರು ಪ್ರಕರಣವಿದ್ದರೆ ಕ್ಲಸ್ಟರ್ ಎಂದು ಘೋಷಿಸಲು ಸೂಚನೆ: ಮುಖ್ಯಮಂತ್ರಿ ಬೊಮ್ಮಾಯಿ

Update: 2021-12-04 11:51 GMT

ಬೆಂಗಳೂರು, ಡಿ.4: ಕೋವಿಡ್‍ನ ಮೂರು ಪ್ರಕರಣಗಳು ಕಂಡುಬಂದಲ್ಲಿ ಕ್ಲಸ್ಟರ್ ಎಂದು  ಘೋಷಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶನಿವಾರ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್‍ನ ಹೊಸ ರೂಪಾಂತರ ತಳಿ ಒಮೈಕ್ರಾನ್  ಕುರಿತು ಪ್ರಾಥಮಿಕ ವರದಿ ಬಂದಿದ್ದು, ಪೂರ್ಣ ಪ್ರಮಾಣದ ವರದಿ ಪಡೆಯಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಇದಕ್ಕೆ ಅನುಸರಿಸುತ್ತಿರುವ ಚಿಕಿತ್ಸಾ ನಿಯಮಗಳನ್ನು ತಿಳಿದುಕೊಳ್ಳಲು ಸೂಚಿಸಲಾಗುತ್ತದೆ. ಪ್ರಸ್ತುತ ಡೆಲ್ಟಾ ತಳಿಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನೇ ಮುಂದುವರೆಸಬೇಕೆಂದು ಮಾಹಿತಿಯಿದ್ದು, ಈ ಬಗ್ಗೆ ವೈಜ್ಞಾನಿಕ ವಿಧಾನವನ್ನು ಅನುಸರಿಸಲು ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಒಮೈಕ್ರಾನ್ ತೀವ್ರಗತಿಯಲ್ಲಿ ಹರಡುವ ತಳಿಯಾಗಿದ್ದು, ಪರಿಣಾಮ ಹೆಚ್ಚು ತೀವ್ರವಾಗಿರುವುದಿಲ್ಲ ಎಂದು ತಜ್ಞರ ಅಭಿಪ್ರಾಯ. ಆದರೆ ಸಂಪರ್ಕಿತರ ಪತ್ತೆ ಹಾಗೂ ಚಿಕಿತ್ಸೆಯನ್ನು ತೀವ್ರಗೊಳಿಸಲು ಸೂಚಿಸಲಾಗಿದೆ. ಎರಡು ವಿಧದ ಕ್ಲಸ್ಟರ್ ನಿರ್ವಹಣೆಗೆ ಸೂಚಿಸಲಾಗಿದ್ದು, ಶಾಲೆ ಮತ್ತು ಹಾಸ್ಟೆಲ್ ಕ್ಲಸ್ಟರ್ ಹಾಗೂ ಬೆಂಗಳೂರಿನ ಅಪಾರ್ಟ್ ಮೆಂಟ್ ಸಮುಚ್ಚಯ ಕ್ಲಸ್ಟರ್ ನಿರ್ವಹಣೆ ಮಾಡಲಾಗುವುದು ಎಂದು ಅವರು ಹೇಳಿದರು.

ಅಲ್ಲಿರುವವರಿಗೆ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು.  ಅಪಾರ್ಟ್ ಮೆಂಟ್ ನಲ್ಲಿ ಜನ ಸೇರುವ ಸಂದರ್ಭದಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಸೇರಬಹುದು, ಹೊರಗಿನವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಶಾಲಾ, ಕಾಲೇಜುಗಳಲ್ಲಿ ಪೋಷಕರು, ಸಿಬ್ಬಂದಿ, ಮತ್ತು ನಸಿರ್ಂಗ್, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ತಂಗಿರುವ ಹಾಸ್ಟೆಲ್‍ಗಳಲ್ಲಿ ಎಲ್ಲರಿಗೂ ಪರೀಕ್ಷೆ ಕಡ್ಡಾಯ ಹಾಗೂ ಎರಡು ಡೋಸ್ ಲಸಿಕೆ ಅಭಿಯಾನ ಕೈಗೊಳ್ಳಬೇಕು. ಕೋ-ಮಾರ್ಬಿಡಿಟಿ ಇದ್ದವರಿಗೆ ಪರೀಕ್ಷೆಯಾಗಬೇಕು. ಎಲ್ಲಿಯೂ ಸಣ್ಣ ಸಂಶಯ ಬರದಂತೆ ವ್ಯವಸ್ಥೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇಂದ್ರ ಸಚಿವರ ಹೇಳಿಕೆ: ಸಂಸತ್‍ನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಪಂಜಾಬ್‍ನಿಂದ ಮಾತ್ರ ಆಕ್ಸಿಜನ್ ಕೊರತೆಯಿಂದ ನಾಲ್ವರು ಮರಣ ಹೊಂದಿರುವ ಬಗ್ಗೆ ವರದಿ ಬಂದಿದೆ.  ಬೇರೆ ಯಾವ ರಾಜ್ಯಗಳಿಂದಲೂ ವರದಿ ಬಂದಿಲ್ಲ ಎಂದು ಹೇಳಿಕೆ ನೀಡಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸಂಸತ್ತಿನಲ್ಲಿ ಯಾವ ಸನ್ನಿವೇಶದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಬಗ್ಗೆ ಮಾಹಿತಿ ಇಲ್ಲ ಎಂದರು.

ಆರೋಗ್ಯ ಸಚಿವರೊಂದಿಗೆ ಚರ್ಚೆ: ದಕ್ಷಿಣ ಆಫ್ರಿಕಾದಿಂದ ಬಂದಿದ್ದ 10 ಜನರ ಸಂಪರ್ಕ ಇಲ್ಲದಿರುವ ಬಗ್ಗೆ ಆರೋಗ್ಯ ಸಚಿವರು ಹೇಳಿಕೆ ನೀಡಿರುವ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರಿಸಿದ ಮುಖ್ಯಮಂತ್ರಿ, ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಆರೋಗ್ಯ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.

ಪೊಲೀಸರ ಬಗ್ಗೆ ಕಾಳಜಿಯುಳ್ಳ ಗೃಹ ಸಚಿವರು: ಗೃಹ ಸಚಿವರು ಪೊಲೀಸರ ಮನ ನೋಯುವಂತೆ ಮಾತನಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಈ ಬಗ್ಗೆ ಅವರು ಈಗಾಗಲೇ ಸ್ಪಷ್ಟೀಕರಣ ನೀಡಿದ್ದು, ಎಲ್ಲರಿಗೂ ಇದನ್ನು ಹೇಳಿಲ್ಲ, ನಿರ್ದಿಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿದ್ದು ಎಂದಿದ್ದಾರೆ. ಪೊಲೀಸರ ಕಲ್ಯಾಣ ಹಾಗೂ ಸವಲತ್ತು ನೀಡಲು ಅತಿ ಹೆಚ್ಚು ಕಾಳಜಿಯಿರುವ ಗೃಹ ಸಚಿವರು ಎಂದರು.

ಬೆಳಗಾವಿ ಅಧಿವೇಶನ: ಬೆಳಗಾವಿ ಅಧಿವೇಶನದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಅಧಿವೇಶದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಎರಡು ಡೋಸ್ ಲಸಿಕೆ ಕಡ್ಡಾಯ, ಸ್ಯಾನಿಟೈಸ್ ಮಾಡುವುದು ಹಾಗೂ ಆಸನ ವ್ಯವಸ್ಥೆಯನ್ನು ಕೋವಿಡ್ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡುವ ಮೂಲಕ ಸುರಕ್ಷಿತವಾಗಿ ಬೆಳಗಾವಿಯಲ್ಲಿ ಅಧಿವೇಶನವನ್ನು ಹಮ್ಮಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News