×
Ad

ಸೆಮಿಕಂಡಕ್ಟರ್ ವಲಯದ ಉತ್ತೇಜನಕ್ಕೆ ವಿಮಾನ ನಿಲ್ದಾಣದ ಸನಿಹದಲ್ಲೇ 200ಎಕರೆ ಭೂಮಿ: ಸಚಿವ ಡಾ.ಅಶ್ವತ್ಥನಾರಾಯಣ

Update: 2021-12-04 17:42 IST

ಬೆಂಗಳೂರು, ಡಿ. 4: ರಾಜ್ಯದಲ್ಲಿ ಸೆಮಿಕಂಡಕ್ಟರ್ ವಲಯವನ್ನು ಸಮಗ್ರವಾಗಿ ಉತ್ತೇಜಿಸುವ ಸಲುವಾಗಿ 2 ಸಾವಿರ ಕೋಟಿ ರೂ.ಸಬ್ಸಿಡಿ ನೀಡಲಾಗುತ್ತಿದ್ದು, ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ 200 ಎಕರೆ ಭೂಮಿಯನ್ನೂ ಈಗಾಗಲೇ ಗುರುತಿಸಲಾಗಿದೆ' ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. 

ಶನಿವಾರ ಭಾರತೀಯ ಎಲೆಕ್ಟ್ರಾನಿಕ್ ಉದ್ಯಮಗಳ ಒಕ್ಕೂಟವು ಏರ್ಪಡಿಸಿದ್ದ `ಸೆಮಿಕಂಡಕ್ಟರ್ ವಲಯದಲ್ಲಿ ಭಾರತಕ್ಕಿರುವ ಅವಕಾಶಗಳು’ ಎನ್ನುವ ವೆಬಿನಾರ್‍ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೆಮಿಕಂಡಕ್ಟರ್ ವಲಯದ ಕಂಪೆನಿಗಳಿಗೆ ಅಗತ್ಯ ಸೌಲಭ್ಯಗಳೊಂದಿಗೆ ಭೂಮಿಯನ್ನು ಒದಗಿಸುವ ಸಂಬಂಧ ಈಗಾಗಲೇ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು. 

ದೇಶದ ಸೆಮಿಕಂಡಕ್ಟರ್ ವಲಯದ ಉತ್ಪಾದನೆಯಲ್ಲಿ ಶೇ.64ರಷ್ಟು ರಾಜ್ಯದಲ್ಲೇ ಆಗುತ್ತಿದೆ. ಇದನ್ನು ಮತ್ತಷ್ಟು ಸದೃಢವಾಗಿ ಬೆಳೆಸಲು ಮೈಸೂರಿನಲ್ಲಿ ಈಗಾಗಲೇ ಒಂದು ಉತ್ಪನ್ನಗಳ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಗತ್ಯವೆನಿಸಿದರೆ ಇನ್ನೂ ಹಲವೆಡೆಗಳಲ್ಲಿ ಇಂತಹ ಕೇಂದ್ರಗಳನ್ನು ಆರಂಭಿಸಲಾಗುವುದು. ಜೊತೆಗೆ, ಈ ವಲಯಕ್ಕೇ ಸೀಮಿತವಾದ ಉತ್ಕೃಷ್ಟತಾ ಕೇಂದ್ರಗಳನ್ನು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು. 
ಸೆಮಿಕಂಡಕ್ಟರ್ ಮತ್ತು ಚಿಪ್ ಉತ್ಪಾದನೆಯಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಕೇಂದ್ರ ಸರಕಾರವು ಕೂಡ ಸಾಧನೆಯನ್ನು ಆಧರಿಸಿ ಪ್ರೋತ್ಸಾಹಕ ರಿಯಾಯಿತಿಗಳನ್ನು ಕೊಡುತ್ತಿದೆ. ರಾಜ್ಯವು ಸಬ್ಸಿಡಿ ಮೂಲಕ ಇದನ್ನು ವಿಸ್ತರಿಸಿದೆ. ಈಗಿರುವ ಸಬ್ಸಿಡಿ ಪ್ರಮಾಣವನ್ನು ಕೂಡ ಹೆಚ್ಚಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

ಉದ್ದಿಮೆಗಳ ಬೇಡಿಕೆ ಮತ್ತು ಅಗತ್ಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಎಂಜಿನಿಯರಿಂಗ್, ಪದವಿ, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ ಶಿಕ್ಷಣ ಕ್ರಮಗಳನ್ನು ಸಮಗ್ರವಾಗಿ ಬದಲಿಸಲಾಗಿದ್ದು, ವಿಶ್ವದರ್ಜೆಯ ಗುಣಮಟ್ಟವನ್ನು ಅಳವಡಿಸಿಕೊಳ್ಳಲಾಗಿದೆ. ಇದರ ಜತೆಗೆ ಸರಕಾರಿ ಉಪಕರಣಾಗಾರಗಳನ್ನು ಉನ್ನತೀಕರಿಸಲಾಗಿದ್ದು, ಸೆಮಿಕಂಡಕ್ಟರ್ ವಲಯದ ಬೆಳವಣಿಗೆಗೆ ತಕ್ಕ ಕಾರ್ಯಪರಿಸರವನ್ನು ನಿರ್ಮಿಸಲಾಗಿದೆ ಎಂದು ಅವರು ನುಡಿದರು. 

ಈ ವಲಯದ ಹತ್ತಾರು ಕಂಪೆನಿಗಳು ರಾಜ್ಯದಲ್ಲಿ ನೆಲೆಯೂರಲು ಆಸಕ್ತಿ ತೋರಿಸಿವೆ. ವಿದ್ಯುನ್ಮಾನ ಉತ್ಪನ್ನಗಳು ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಈ ಸದಾವಕಾಶವನ್ನು ರಾಜ್ಯದ ಆರ್ಥಿಕ ಬೆಳವಣಿಗೆಗೆ ಬಳಸಿಕೊಳ್ಳಲು ಸರಕಾರ ತೀರ್ಮಾನಿಸಿದೆ. ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೆಮಿಕಂಡಕ್ಟರ್ ವಲಯಕ್ಕೆ ಒದಗಿಸಲಾಗುವುದು ಎಂದು ಅವರು ನುಡಿದರು. 

ವೆಬಿನಾರ್ ಸಂಕಿರಣದಲ್ಲಿ ಒಕ್ಕೂಟದ ಪ್ರತಿನಿಧಿಗಳಾದ ಡಾ.ಅಶ್ವಿನ್ ಅಗರವಾಲ್, ರಾಜು ಗೋಯೆಲ್, ಅಮೃತ್ ಮಾನ್ವಾನಿ, ರಾಜು ಮಾಣಿಕ್ಯಂ ಮತ್ತು ಮುಕುಲ್ ಯುದ್ಧವೀರ್ ಸಿಂಗ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News