ಪೊಲೀಸರನ್ನು ನಿಂದಿಸಿದ ವೀಡಿಯೊ ವೈರಲ್: ಗೃಹಸಚಿವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಗೆ ದೂರು
ಚಿಕ್ಕಮಗಳೂರು, ಡಿ.4: ತಮ್ಮ ಅಧೀನದ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ನಾಯಿಗಳಿಗೆ ಹೋಲಿಸಿ ಲಂಚ ತಿನ್ನುವವರು ಎಂದು ಅವಹೇಳನಕಾರಿಯಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ರೈತಸಂಘ ಹಾಗೂ ಹಸಿರುಸೇನೆ ಮುಖಂಡರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಜಿಲ್ಲೆಯ ಕೊಪ್ಪ ತಾಲೂಕಿನ ರೈತಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷ ನವೀನ್ ಕರುವಾನೆ ನೇತೃತ್ವದಲ್ಲಿ ಸಂಘದ ಮುಖಂಡರು ಶನಿವಾರ ಕೊಪ್ಪ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರಗ ಜ್ಞಾನೇಂದ್ರ ಅವರು ರಾಜ್ಯ ಗೃಹಸಚಿವರಾಗಿದ್ದಾರೆ. ಅವರ ಅಧೀನದಲ್ಲಿರುವ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ನಾಯಿಗಳಿಗೆ ಹೋಲಿಸಿ ಲಂಚ ತಿನ್ನುವವರು ಎಂದು ಅವಮಾನಿಸಿದ್ದಾರೆ. ಪೊಲೀಸರು ತಮ್ಮ ಕೆಲಸ ಬಿಟ್ಟು ಲಂಚ ತಿಂದು ನಾಯಿಗಳಂತೆ ಬಿದ್ದಿರುತ್ತಾರೆ. ಸರಕಾರ ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದ್ದರೂ ಲಂಚ ತಿಂದು ಬದುಕುತ್ತಿದ್ದಾರೆ. ಪೊಲೀಸರಾಗಲೂ ಯೋಗ್ಯತೆ ಇಲ್ಲದವರು ಇಲಾಖೆಯಲ್ಲಿದ್ದಾರೆ. ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೇ ಯೂನಿಫಾರ್ಮ್ ಬಿಚ್ಚಿಟ್ಟು ಕೆಲಸ ಬಿಟ್ಟು ಸಾಯಿರಿ ಎಂದು ನಿಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ವತಃ ಗೃಹಸಚಿವ ಜ್ಞಾನೇಂದ್ರ ಅವರು ತಮ್ಮ ಅಧೀನದಲ್ಲಿರುವ ಇಲಾಖೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಇಂತಹ ನಿಂದನೆಯ ಮಾತುಗಳನ್ನಾಡಿರುವುದರಿಂದ ಇಡೀ ಇಲಾಖೆಯನ್ನು ಜನರು ಸಂಶಯದಿಂದ ನೋಡುವಂತಾಗಿದೆ. ತಮ್ಮ ಜೀವದ ಹಂಗು ತೊರೆದು ಸಮಾಜದ ನೆಮ್ಮದಿಗಾಗಿ ಕೆಲಸ ಮಾಡುತ್ತಿರುವ ರಾಜ್ಯದ ಪೊಲೀಸ್ ಇಲಾಖೆ ಬಗ್ಗೆ ಇಡೀ ದೇಶದಲ್ಲಿ ಉತ್ತಮ ಹೆಸರಿದೆ. ಆದರೆ ಗೃಹಸಚಿವರ ಇಂತಹ ಮಾತುಗಳಿಂದಾಗಿ ಪೊಲೀಸರ ಮನೋಬಲವೇ ಕುಗ್ಗಿದಂತಾಗಿದೆ. ರಾಜ್ಯ ಸರಕಾರದ ಉನ್ನತ ಸ್ಥಾನದಲ್ಲಿರುವ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಮಾತುಗಳಿಂದಾಗಿ ಪೊಲೀಸ್ ಇಲಾಖೆಯನ್ನು ಅವಮಾನಿಸದಂತಾಗಿದ್ದು, ಕೂಡಲೇ ಅವರ ವಿರುದ್ಧ ಕಾನೂನ ಕ್ರಮಕೈಗೊಳ್ಳಬೇಕೆಂದು ನವೀನ್ ಕರುವಾನೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಆರಗ ಜ್ಞಾನೇಂದ್ರ ಅವರು ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರಿಗೆ ಮೊಬೈಲ್ ಕರೆ ಮಾಡಿ ಪ್ರಕರಣವೊಂದರಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ನಿಂದಿಸುತ್ತಿದ್ದ ವಿಡಿಯೋ ಒಂದನ್ನು ಇತ್ತೀಚೆಗೆ ವಾರ್ತಾಭಾರತಿಯ ಯೂಟೂಬ್ ಚಾನಲ್‍ನ ಮೂಲಕ ಸುದ್ದಿ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರೈತ ಸಂಘದ ಮುಖಂಡರು ಜಿಲ್ಲೆಯ ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.