‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಹೆಸರಿನಲ್ಲಿ ದೇಶ ಸಂಪೂರ್ಣ ನಾಶ: ಮಲ್ಲಿಕಾರ್ಜುನ ಖರ್ಗೆ
ಯಾದಗಿರಿ, ಡಿ. 4: ‘ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಹೆಸರಿನಲ್ಲಿ ದೇಶವನ್ನು ಸಂಪೂರ್ಣ ನಾಶ ಮಾಡಿದೆ. ಬಿಜೆಪಿ ಪ್ರಚಾರಕ್ಕೆ ಯಾವ ಯೋಜನೆಯೂ ಉಳಿದಿಲ್ಲ. ಹೀಗಾಗಿ ನಮ್ಮ ಸರಕಾರದ ಅವಧಿಯಲ್ಲಿ ರೂಪಿಸಿದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಇವರಿಗೆ ಆಗಿಲ್ಲ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಟೀಕಿಸಿದ್ದಾರೆ.
ಶನಿವಾರ ನಗರದಲ್ಲಿ ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣಾ ಅಂಗವಾಗಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ಎಪ್ಪತ್ತು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ವೈದ್ಯಕೀಯ ಕಾಲೇಜು, ಅಣೆಕಟ್ಟು ಕಟ್ಟಿ ನೀರಾವರಿ ಸೌಲಭ್ಯ ಕಲ್ಪಿಸಿದ್ದೇವೆ. ನೀರಾವರಿ, ಕೆರೆ ಕಟ್ಟಿದ್ದರಿಂದ ಈಗ ಹೊಟ್ಟೆ ತುಂಬಾ ಅನ್ನ ಸಿಗುತ್ತಿದೆ. ಆದರೆ, ಮೋದಿ 6 ತಿಂಗಳಲ್ಲಿ 15 ಲಕ್ಷ ರೂ. ಕೊಡುತ್ತೇನೆ ಎಂದಿದ್ದರು. ಆದರೆ, ಅದು ಇನ್ನೂ ಬರಲಿಲ್ಲ' ಎಂದು ಮೋದಿ ವಾಗ್ದಾಳಿ ನಡೆಸಿದರು.
ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗಿಕರಣ ಮಾಡಿದ ಪರಿಣಾಮ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರಾತ್ರೋ ರಾತ್ರಿ ಗರಿಷ್ಠ ಮೊತ್ತದ ನೋಟ್ ರದ್ದು ಮಾಡಿದರು. ಕಪ್ಪು ಹಣವೂ ಬರಲಿಲ್ಲ. ಇಂತಹ ಸ್ಥಿತಿಯನ್ನು ಬಿಜೆಪಿ ತಂದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ನಮ್ಮ ಅವಧಿಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 400 ರೂ.ಗಳಿತ್ತು. ಇದೀಗ ಅದರ ದರ ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಕೇಂದ್ರ ಸರಕಾರ ಸಬ್ಸಿಡಿಯನ್ನು ನೀಡುತ್ತಿಲ್ಲ. ಯುಪಿ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದೆ. ಇಂತಹವರಿಗೆ ಮತದಾರರು ಪಾಠ ಕಲಿಸಬೇಕು ಎಂದು ಅವರು ಕೋರಿದರು.
ಪರಿಷತ್ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಸ್ಥಳೀಯ ಸಂಸ್ಥೆಗಳ ಸಮಸ್ಯೆಯನ್ನು ಪರಿಷತ್‍ನಲ್ಲಿ ಸಮರ್ಪಕವಾಗಿ ಚರ್ಚಿಸುವ ಮೂಲಕ ಪರಿಹಾರ ಕಲ್ಪಿಸಲು ಆದ್ಯತೆ ನೀಡಲಿದ್ದಾರೆ. ನಮ್ಮ ಅಭ್ಯರ್ಥಿ ಎಂದಿಗೂ ಮನೆಯಲ್ಲಿ ಕೂರುವವರಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಯ ಮತದಾರರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು ಎಂದು ಖರ್ಗೆ ಇದೇ ವೇಳೆ ಮನವಿ ಮಾಡಿದರು.
ಸಭೆಯಲ್ಲಿ ಶಾಸಕರಾದ ಶರಣಬಸವಪ್ಪ ದರ್ಶನಾಪುರ, ಡಾ.ಅಜಯ ಸಿಂಗ್, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಪರಿಷತ್ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ ತನ್ನೂರು, ಮಾಜಿ ಸಂಸದ ಬಿ.ವಿ.ನಾಯಕ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.