×
Ad

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಫಿಕ್ಸ್

Update: 2021-12-05 08:05 IST
ಪ್ರಧಾನಿ ಮೋದಿ-ಎಚ್.ಡಿ.ದೇವೇಗೌಡ (Twitter/@narendramodi)

ಬೆಂಗಳೂರು: ಮುಂಬರುವ ವಿಧಾನ ಪರಿಷತ್ ಚುನಾವಣೆಗಾಗಿ ಅಧಿಕಾರಾರೂಢ ಬಿಜೆಪಿ ಜತೆ ಜಾತ್ಯತೀತ ಜನತಾದಳ ಮೈತ್ರಿ ಮಾಡಿಕೊಂಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಕೆಲ ದಿನಗಳಿಂದ ಬಿಜೆಪಿಯ ಉನ್ನತ ನಾಯಕರ ಜತೆ ಮಾತುಕತೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಈ ಒಪ್ಪಂದದ ಪ್ರಕಾರ, ಕೋಲಾರ- ಚಿಕ್ಕಬಳ್ಳಾಪುರ, ಮೈಸೂರು (ಎರಡು ಸ್ಥಾನಗಳು), ಬೆಂಗಳೂರು ಗ್ರಾಮೀಣ, ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಮತದಾರರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಲಿದೆ.

"ದಕ್ಷಿಣ ಕರ್ನಾಟಕದ ಪ್ರದೇಶ ಸೇರಿದಂತೆ ಬಿಜೆಪಿ ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ, ಪಕ್ಷದ ಮತದಾರರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಸೂಚಿಸಲಾಗುವುದು" ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವೆಂಬರ್ 30ರಂದು ಭೇಟಿಯಾಗಿದ್ದ ದೇವೇಗೌಡರು, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಎರಡು ದಿನ ಮೊದಲು ದೂರವಾಣಿ ಮೂಲಕ ಮಾತುಕತೆ ನಡೆಸಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಡ್ಡಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಬಿಜೆಪಿ ಪ್ರಧಾನ ಕಾರ್ಯರ್ಶಿ ಬಿ.ಎಲ್.ಸಂತೋಷ್ ಜತೆ ಚರ್ಚಿಸಿದ್ದರು ಎಂದು ತಿಳಿದು ಬಂದಿದೆ.

75 ಮಂದಿ ಸದಸ್ಯರ ಮೇಲ್ಮನೆಯಲ್ಲಿ ಬಹುಮತ ಪಡೆಯುವ ದೃಷ್ಟಿಯಿಂದ ಜೆಡಿಎಸ್ ಜತೆಗಿನ ಮೈತ್ರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಹಸಿರು ನಿಶಾನೆ ತೋರಿದ್ದಾರೆ ಎನ್ನಲಾಗಿದೆ. ಇದಕ್ಕೂ ಮುನ್ನ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ಈ ಸಂಬಂಧ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News