ಸಿದ್ದರಾಮಯ್ಯರಿಗೆ ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದ ಮಗು: ವೀಡಿಯೊ ವೈರಲ್

Update: 2021-12-05 06:48 GMT

ಶಿವಮೊಗ್ಗ, ಡಿ.5: ತಮ್ಮ‌ ರಾಜಕೀಯ ಜಂಜಾಟದ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಗುವಿನೊಂದಿಗೆ ಮಗುವಾಗಿ ಕಾಲ ಕಳೆದಿರುವ  ಫೋಟೊ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರು ಸಾಗರ ರಸ್ತೆಯ ಹರ್ಷ ಫರ್ನ್ ಹೊಟೇಲ್ ನಲ್ಲಿ ಉಳಿದಿದ್ದರು. ಈ ವೇಳೆ ಸಿದ್ದರಾಮಯ್ಯರನ್ನು ತೋರಿಸಲು ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಕ್ ಕುಮಾರ್ ತಮ್ಮ ಮಗಳು ಸಾನ್ವಿಯನ್ನು ಹೊಟೇಲ್ ಗೆ ಕರೆದೊಯ್ದಿದ್ದರು.

ತಮ್ಮ ಸುತ್ತಲು ಮುಖಂಡರು, ಕಾರ್ಯಕರ್ತರಿದ್ದರೂ ಪುಟಾಣಿ ಸಾನ್ವಿಯನ್ನು ನೋಡುತ್ತಿದ್ದಂತೆ ಸಿದ್ದರಾಮಯ್ಯ ಖುಷಿ ಪಟ್ಟು ಹತ್ತಿರಕ್ಕೆ ಕರೆದು ಮಾತು ಆರಂಭಿಸಿದರು. ‘ಇಲ್ಲಿಗೇಕೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ‘ನಿನ್ನನ್ನು ನೋಡೋಕೆ ಬಂದಿದ್ದೀನಿ’ ಎಂದು ಹೇಳಿದಾಗ ಸಿದ್ದರಾಮಯ್ಯ ಸೇರಿದಂತೆ ಸುತ್ತಲು ಇದ್ದವರು ಜೋರಾಗಿ ನಗಾಡಿದರು.

ಆಗಾಗ ಬರುತ್ತಿದ್ದ ಫೋನ್ ಕರೆಗಳನ್ನು ಸ್ವೀಕರಿಸಿ ಮಾತು ಮುಗಿಸಿ, ಸಾನ್ವಿ ಜೊತೆಗೆ ಸಿದ್ದರಾಮಯ್ಯ ಕೆಲವು ನಿಮಿಷಗಳನ್ನು ಕಳೆದರು. ಆಕೆಯನ್ನು ಮಾತನಾಡಿಸಿ, ಚೆನ್ನಾಗಿ ಓದಬೇಕು ಎಂದು ತಿಳಿಸಿದರು. ಕೆನ್ನೆಗೊಂದು ಮುತ್ತು ಕೊಡಿಸಿಕೊಂಡು ಖುಷಿ ಪಟ್ಟರು.

ರಾಜಕೀಯ ಒತ್ತಡದ ನಡುವೆಯು ಸಿದ್ದರಾಮಯ್ಯ ಅವರು ಮಗುವಿನೊಂದಿಗೆ ಮಗುವಾಗಿ, ಖುಷಿಪಟ್ಟ ವೀಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಫೇಸ್ ಬುಕ್, ವಾಟ್ಸ್ ಆ್ಯಪ್ ನಲ್ಲಿ ಈ ಫೋಟೊ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News