ಬಾಳೆಹೊನ್ನೂರು: ನವೋದಯ ವಿದ್ಯಾಲಯದ ವಿದ್ಯಾರ್ಥಿ-ಶಿಕ್ಷಕರ ಸಹಿತ 67 ಮಂದಿಗೆ ಕೋವಿಡ್ ದೃಢ
ಚಿಕ್ಕಮಗಳೂರು, ಡಿ.5: ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ನವೋದಯ ವಿದ್ಯಾಲಯದಲ್ಲಿ ಕೊರೋನ ಸ್ಫೋಟಗೊಂಡಿದ್ದು, ಶಿಕ್ಷಕರು ಸೇರಿದಂತೆ 67 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಿದ್ಯಾಲಯವನ್ನು ಜಿಲ್ಲಾಡಳಿತ ಸದ್ಯ ಸೀಲ್ ಡೌನ್ ಮಾಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಮೂರು ದಿನಗಳಲ್ಲಿ 60 ವಿದ್ಯಾರ್ಥಿಗಳು ಮೂವರು ಶಿಕ್ಷಕರು, ನಾಲ್ವರು ಸಿಬ್ಬಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.
ಬಾಳೆಹೊನ್ನೂರು ಸಮೀಪದ ಸಿಗೋಡುನಲ್ಲಿರುವ ಈ ವಸತಿ ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿಯಲ್ಲಿ ಸೋಂಕು ಕಂಡು ಬಂದಿದೆ.
ಮೊದಲು ಶಿಕ್ಷಕರಿಗೊಬ್ಬರಿಗೆ ಕೊರೋನ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 418 ವಿದ್ಯಾರ್ಥಿಗಳು, ಸಿಬ್ಬಂದಿಯ ಸ್ವ್ಯಾಬ್ ಪಡೆದು ತಪಾಸಣೆ ನಡೆಸಿದ ಆರೋಗ್ಯ ಇಲಾಖೆ ಈ ವೇಳೆ 67 ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದನ್ನು ದೃಢಪಡಿಸಿದೆ.
ಕೊರೋನ ಪತ್ತೆಯಾದವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ, ಆದರೆ ಸ್ವ್ಯಾಬ್ ಟೆಸ್ಟ್ ವೇಳೆ ಸೋಂಕು ದೃಡಪಟ್ಟಿದೆ. ಸೋಂಕಿತರನ್ನು ವಸತಿ ಶಾಲೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.
ಸ್ಥಳಕ್ಕೆ ಡಿ.ಎಚ್.ಓ, ಡಾ.ಉಮೇಶ್, ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್, ಆರೋಗ್ಯ ಸಿಬ್ಬಂದಿ ಭೇಟಿ ನೀಡಿದ್ದಾರೆ.
ಸ್ಥಳದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.