ಸಿಎಂ ಸ್ಥಾನದಿಂದ ಬೊಮ್ಮಾಯಿಯನ್ನು ಕಿತ್ತು ಹಾಕಲು ಈಶ್ವರಪ್ಪ ಮುಂದಾಗಿದ್ದಾರೆ: ಸಿದ್ದರಾಮಯ್ಯ ಆರೋಪ

Update: 2021-12-05 14:53 GMT

ಬೆಳಗಾವಿ, ಡಿ. 5: ‘ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಕೊಂದವರು ಆರೆಸ್ಸೆಸ್ ನವರು. ಗಾಂಧೀಜಿ ಎದೆಗೆ ಗುಂಡಿದ್ದ ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಪರಿವಾರಕ್ಕೆ ಸೇರಿದ್ದು, ಬಿಜೆಪಿ-ಆರೆಸೆಸ್ಸ್, ಗೋಡ್ಸೆ ಪಳಿಯುಳಿಕೆ' ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಇಂದಿಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ರಾಮದುರ್ಗ ತಾಲೂಕಿನ ಕಲ್ಲೂರ ಸಿದ್ದೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಆರೆಸೆಸ್ಸ್ ಮೂಲದವರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಆರೆಸೆಸ್ಸ್ ಮೂಲದವರಲ್ಲ. ಆದರೆ, ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಲು ಸಚಿವ ಈಶ್ವರಪ್ಪ ಮುಂದಾಗಿದ್ದಾರೆ ಎಂದು ದೂರಿದರು.

ಬಿಜೆಪಿಗೆ ಸೋಲಿನ ಭೀತಿ ಆವರಿಸಿದ್ದು, ಹೀಗಾಗಿಯೇ ಜಿಲ್ಲಾ ಹಾಗೂ ತಾಲೂಕು ಪಂಚಾಯಿತ್ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಬಿಜೆಪಿಯವರದ್ದು ಹಿಂದಿನಿಂದಲೂ ದ್ವಿಮುಖ ರಾಜಕಾರಣ. ನೇರವಾಗಿ ಅವರಿಗೆ ರಾಜಕೀಯ ಮಾಡಿ ಗೊತ್ತೆ ಇಲ್ಲ. ಹೀಗಾಗಿ ಅಡ್ಡದಾರಿಯ ಮೂಲಕ ಚುನಾವಣೆಗಳನ್ನು ಗೆಲ್ಲಲು ಹುನ್ನಾರ ನಡೆಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಎನ್.ಎ.ಹಾರಿಸ್, ಮಾಜಿ ಸಚಿವ ಅಶೋಕ ಪಟ್ಟಣ, ವಿಶ್ವಾಸ ವೈದ್ಯ, ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News