ವಿಧಾನ ಪರಿಷತ್ ಚುನಾವಣೆ: ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದರೂ ಆಶ್ಚರ್ಯವಿಲ್ಲ ಎಂದ ಸಿದ್ದರಾಮಯ್ಯ

Update: 2021-12-05 14:57 GMT

ಬೆಳಗಾವಿ: ಕಳೆದ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯನ್ನೇ ಸೋಲಿಸಿದ್ದರು. ಈ ಚುನಾವಣೆಯಲ್ಲಿಯೂ ಲಖನ್‍ಗಾಗಿ ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ್ ಕವಟಗಿ ಮಠ ಅವರನ್ನು ಸೋಲಿಸಿದರೂ ಯಾವುದೇ ಆಶ್ಚರ್ಯವಿಲ್ಲ ಎಂದು  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ನಮ್ಮ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಡವರಿಗೆ ಏಳು ಕೆಜಿ ಅಕ್ಕಿ ಕೊಡುತ್ತಿದ್ದೇವೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಅದನ್ನು 5 ಕೆಜಿಗೆ ಇಳಿಕೆ ಮಾಡಿದ್ದಾರೆ. ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಉಚಿತವಾಗಿ ಅಕ್ಕಿ ಕೊಟ್ಟರೆ ಅವರಿಗೆ ಅನುಕೂಲ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಜನರ ತೆರಿಗೆ ಹಣವನ್ನು ಅವರಿಗೆ ಕೊಡಲು ಏನು ಸಮಸ್ಯೆ ಎಂದು ವಾಗ್ದಾಳಿ ನಡೆಸಿದರು.

2023ರ ಚುನಾವಣೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದ್ದು, ಬಿಜೆಪಿ ಸರಕಾರದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದ ಅವರು, ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ದನಿ ಎತ್ತುವವರನ್ನು ವಿಧಾನ ಪರಿಷತ್‍ಗೆ ಕಳುಹಿಸಿಕೊಡಬೇಕು. ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವವರನ್ನು ಯಾವುದೇ ಕಾರಣಕ್ಕೂ ಕಳುಹಿಸಬೇಡಿ. ನಮ್ಮ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News