ದಾವಣಗೆರೆ: ಪೊಲೀಸ್ ವಶದಲ್ಲಿದ್ದ ದಲಿತ ಯುವಕನ ಸಾವು; ಅನುಮಾನ ವ್ಯಕ್ತಪಡಿಸಿದ ಸಾರ್ವಜನಿಕರು

Update: 2021-12-05 16:29 GMT

ದಾವಣಗೆರೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಇದೊಂದು ಲಾಕಪ್ ಡೆತ್ ಎಂಬುದಾಗಿ ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು, ಕುಟುಂಬ ವರ್ಗದವರು ಇಲ್ಲಿನ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ರವಿವವಾರ ಧರಣಿ ನಡೆಸಿದರು.

ಚಿತ್ರದುರ್ಗ ಜಿಲ್ಲೆ ಭರಮ ಸಾಗರ ಹೋಬಳಿ ಬಹಾದ್ದೂರಘಟ್ಟ ಗ್ರಾಮದ ಕುಮಾರ್(35 ವರ್ಷ) ಪೊಲೀಸ್ ವಶದಲ್ಲಿದ್ದಾಗ ಸಾವನ್ನಪ್ಪಿದ್ದು, ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು.

ಪೊಲೀಸ್ ವಶದಲ್ಲಿದ್ದಾಗಲೇ ಠಾಣೆಯಲ್ಲಿ ಕುಮಾರ್ ಸಾವನ್ನಪ್ಪಿದ್ದ ವಿಚಾರ ಕುಟುಂಬದವರು, ಸಂಘಟನೆಯವರಿಗೆ ತಿಳಿದು ದಾವಣಗೆರೆ ಜಿಲ್ಲಾ ಆಸ್ಪತ್ರೆ ಶವಾಗಾರದ ಬಳಿ ಜಮಾಯಿಸಿದರು. ಪೊಲೀಸ್ ಅಧಿಕಾರಿಗಳೇ ಕುಮಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಕುಮಾರನದ್ದು ಸಹಜ ಸಾವಲ್ಲ, ಲಾಕಪ್ ಡೆತ್ ಎಂಬುದಾಗಿ ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು, ಮೃತ ಕುಮಾರನ ಬಂಧು-ಮಿತ್ರರು ಆರೋಪಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಶವಾಗಾರದ ಬಳಿ ಧಾವಿಸಿ, ಪ್ರತಿಭಟನಾಕಾರರಿಗೆ ಸಮಾಧಾನಿಸ ಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ.ಪ್ರಕಾಶ ಬಿರಾದಾರ್ ಮಾತನಾಡಿ, ವಿಚಾರಣೆ ನೆಪದಲ್ಲಿ ಕುಮಾರನನ್ನು ಶನಿವಾರ ಸಂಜೆ ಕರೆ ತಂದು, ದಾವಣಗೆರೆ ಲಾಡ್ಜ್ ನಲ್ಲಿಟ್ಟು ರವಿವವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಗೆ ದಾಖಲು ಮಾಡುವ ಮುನ್ನವೇ ಕುಮಾರ ಸಾವನ್ನಪ್ಪಿದ್ದಾಗಿ ವೈದ್ಯರು ಸಹ ಹೇಳಿದ್ದಾರೆ. ಹಾಗಾಗಿ ಪೊಲೀಸ್ ವಶದಲ್ಲಿದ್ದಾಗಲೇ ಕುಮಾರ ಸಾವನ್ನಪ್ಪಿದ್ದಾನೆ. ಕುಮಾರನ ಮೇಲೆ ಆರೋಪವಿದ್ದರೆ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ನೀಡಬೇಕಿತ್ತು.ಲಾಡ್ಜ್ ನಲ್ಲಿಟ್ಟುದ್ದು ಏಕೆ? ಕುಮಾರನ ಸಾವಿಗೆ ಕಾರಣರಾದ ಸಿಇಎನ್ ಅಪರಾಧ ಠಾಣೆಯ ಸಿಪಿಐ ಗಿರೀಶ ಹಾಗೂ ಕಾನ್ಸಟೇಬಲ್ ಕೊಟ್ರೇಶರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಮೃತನ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು. ಮಕ್ಕಳ ಜವಾಬ್ದಾರಿಗಾಗಿ 50 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೃತನ ಸಂಬಂಧಿಗಳ ದೂರಿನನ್ವಯ ಪೊಲೀಸರ ವಿರುದ್ಧ ಕೇಸ್ ದಾಖಲಿಸಿ, ವಿಚಾರಣೆ ನಡೆಸಲಾಗುವುದು. ಪ್ರಕರಣದ ಸಂಪೂರ್ಣ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಅಗತ್ಯ ಬಿದ್ದರೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು 

 ಸಿ.ಬಿ.ರಿಷ್ಯಂತ್  - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News