ಮೈಸೂರು-ಚಾಮರಾಜನಗರದಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

Update: 2021-12-05 15:57 GMT

ಮೈಸೂರು,ಡಿ.5: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. ಮತದಾರರು ಅನ್ಯ ಪಕ್ಷದವರ ಮಾತಿಗೆ ಕಿವಿಗೊಡಬಾರದು ಎಂದು ಸಹಕಾರ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ನಗರದ ರಾಜೇಂದ್ರ ಕಲಾಮಂದಿರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಎಲ್ಲಿ ಜೆಡಿಎಸ್ ಇಲ್ಲವೋ ಅಲ್ಲಿ ಹೊಂದಾಣಿಕೆ ಕುರಿತು ನಾಯಕರು ನಿರ್ಧಾರ ಮಾಡುತ್ತಾರೆ. ಮೈಸೂರು-ಚಾಮರಾಜನಗರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಎಂದರು.

ನಮ್ಮ ಅಭ್ಯರ್ಥಿ ರಘು ಕೌಟಿಲ್ಯ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಈಗಾಗಲೇ 15 ಕ್ಷೇತ್ರದಲ್ಲಿ ಪ್ರಚಾರ ಮಾಡಿ, ಪ್ರತಿ ಗ್ರಾಪಂ ಸದಸ್ಯರ ಭೇಟಿ ಮಾಡಿದ್ದಾರೆ. ಆದರೆ ಕಾಂಗ್ರೆಸ್, ಜೆಡಿಎಸ್ ಇನ್ನೂ ಟೇಕಾಫ್ ಆಗಿಲ್ಲ. ಸಿದ್ದರಾಮಯ್ಯ ಬಂದಾಗ ಟೇಕಾಫ್ ಆಗುತ್ತದೆ  ಅವರು ಹೋದಾಗ ಠುಸ್ ಆಗುತ್ತದೆ. ಜೆಡಿಎಸ್ ಬಗ್ಗೆಯಂತೂ ಹೇಳುವ ಹಾಗೆ ಇಲ್ಲ. ಅಭ್ಯರ್ಥಿಯನ್ನು ಹಾಕಿ ಕುಮಾರಸ್ವಾಮಿ ಟೇಕಾಫ್ ಅಂತಾರೆ. ಆದರೆ ಟೇಕಾಫ್ ಆಗುತ್ತಿಲ್ಲ ಎಂದು ಹೇಳಿದರು.

ಕಳೆದ ಬಾರಿ ಕೆಲವೇ ಅಂತರದಿಂದ ರಘು ಸೋತಿದ್ದರು. ಈ ಬಾರಿ ಅವರನ್ನು ಗೆಲ್ಲಿಸಿ. ಗ್ರಾಪಂ ಸದಸ್ಯರಿಗೆ ಎಲ್ಲಾ ಜ್ಞಾನ ಇದೆ. ಅಪ್ ಡೌನ್ ಎಲ್ಲಾ ಗ್ರಾಪಂನಲ್ಲೇ ಆಗೋದು. ಗೆದ್ದ ಸದಸ್ಯರಿಗೆ ಅಭಿವೃದ್ಧಿ ತುಡಿತ ಇದೆ. ಅನುದಾನದ ನಿರೀಕ್ಷೆ ಇರುತ್ತದೆ, ಮತದಾರರ ಪರ ಕೆಲಸ ಮಾಡಲು ಕಾತುರರಾಗಿದ್ದಾರೆ. ಗ್ರಾಪಂ ಸದಸ್ಯರ ನಿರೀಕ್ಷೆಗೆ ತಕ್ಕಂತೆ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ರಘು ಅವರು ಮಾಡಲಿದ್ದಾರೆ ಎಂದು ಹೇಳಿದರು.

ರಘು ಅವರು ಮೈಸೂರು ಜಿಲ್ಲೆಯವರಾದರೂ ಚಾಮರಾಜನಗರ ಜಿಲ್ಲೆಯ ಅಳಿಯ. ಎರಡೂ ಜಿಲ್ಲೆಗಳ ಒಡನಾಟ ಅವರಿಗಿದ್ದು ಎರಡೂ ಕಡೆ ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News